13 ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಣವ್ ಮುಖರ್ಜಿ
ಕೋಲ್ಕತಾ, ಆಗಸ್ಟ್ 13: ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವೆಂಟಿಲೇಟರ್‌ನಲ್ಲಿ ಇರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. 13 ವರ್ಷಗಳ ಹಿಂದೆ ಪ್ರಣವ್ ಮುಖರ್ಜಿ ಅವರು ಕಾರ್ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಆಗ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಆ ಸಂದರ್ಭದಲ್ಲಿ ತಾವು ಚಿಕಿತ್ಸೆ ನೀಡಿದ್ದಾಗಿ ವೈದ್ಯರೊಬ್ಬರು ನೆನಪಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ವೈದ್ಯ ಡಾ. ಬಸುದೇಬ್ ಮೊಂಡಲ್ ಅವರು ಕೃಷ್ಣನಗರದಲ್ಲಿ ನರ್ಸಿಂಗ್ ಹೋಮ್ ಒಂದನ್ನು ನಡೆಸುತ್ತಿದ್ದಾರೆ. 13 ವರ್ಷಗಳ ಹಿಂದೆ, 2007ರ ಏಪ್ರಿಲ್ 7ರಂದು ನಡೆದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
'ಕೋಲ್ಕತಾದಿಂದ ಮುರ್ಷಿದಾಬಾದ್ ಜಿಲ್ಲೆಗೆ ಮರಳುತ್ತಿರುವಾಗ ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರಿದ್ದ ಕಾರು ನಾಡಿಯಾ ಜಿಲ್ಲೆಯ ನಕಾಶಿಪರದಲ್ಲಿ ಅಪಘಾತಕ್ಕೀಡಾಯಿತು. ಟ್ರಕ್ ಒಂದು ಪ್ರಣಬ್ ಮುಖರ್ಜಿ ಅವರಿದ್ದ ಕಾರ್‌ಗೆ ಡಿಕ್ಕಿ ಹೊಡೆದಿತ್ತು. ಪ್ರಣವ್ ಅವರ ತಲೆಗೆ ಆಳವಾದ ಗಾಯಗಳಾಗಿದ್ದವು. ಮೊದಲು ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು. ಬಳಿಕ ಕೃಷ್ಣನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಆದರೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಕ್ಸ್ ರೇ ಸೌಲಭ್ಯಗಳಿಲ್ಲದ ಕಾರಣ ಜಿಲ್ಲೆಯ ಅಧಿಕಾರಿಗಳು ನನಗೆ ಫೋನ್ ಮಾಡಿದ್ದರು. ಮುಖರ್ಜಿ ಅವರನ್ನು ನಿಮ್ಮ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಎಲ್ಲ ಸೌಲಭ್ಯಗಳನ್ನೂ ಸಿದ್ಧಪಡಿಸಿಕೊಳ್ಳಿ ಎಂದು ಸೂಚಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಕೆಲವು ವೈದ್ಯರ ಉಸ್ತುವಾರಿಯಲ್ಲಿ ಪ್ರಣವ್ ಅವರನ್ನು ತಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ತೀವ್ರ ನೋವುಣ್ಣುತ್ತಿದ್ದರೂ ಬಹಳ ಶಾಂತವಾಗಿ, ಸ್ಥಿತಪ್ರಜ್ಞರಾಗಿದ್ದರು. ಅವರು ಅಷ್ಟೇ ವಿನಮ್ರರೂ ಆಗಿದ್ದರು. ಅವರನ್ನು ಪರೀಕ್ಷಿಸಿದೆವು. ಅದೃಷ್ಟವಶಾತ್ ತಲೆಯ ಒಳಭಾಗದಲ್ಲಿ ಯಾವುದೇ ಗಾಯವಿರಲಿಲ್ಲ. ಬಳಿಕ ಅವರನ್ನು ರಾತ್ರಿ ವೇಳೆ ಕೋಲ್ಕತ್ತಾಗೆ ಕರೆದೊಯ್ಯಲಾಗಿತ್ತು ಎಂದು ವಿವರಿಸಿದ್ದಾರೆ.












Click it and Unblock the Notifications