300 ವೈದ್ಯರ ರಾಜೀನಾಮೆ, ಬಂಗಾಳದಲ್ಲಿ ಮುಗಿಲು ಮುಟ್ಟಿದ್ದ ಆಕ್ರೋಶ
ಕೋಲ್ಕತ್ತಾ, ಜೂನ್ 15: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಆಕ್ರೋಶ ಮುಗಿಲು ಮುಟ್ಟಿದೆ. ಇದುವರೆಗೆ ಸುಮಾರು 300 ಕ್ಕೂ ಹೆಚ್ಚು ಸರ್ಕಾರಿ ವೈದ್ಯರು ರಾಜೀನಾಮೆ ನೀಡಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮೊಂದಿಗೆ ಮಾತುಕತೆಗೆ ಬರುವಂತೆ ಕಿರಿಯ ವೈದ್ಯರುಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಮಂತ್ರಿಸಿದ್ದಾರೆ.
ಆದರೆ ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರೇ ಎನ್ ಆರ್ ಎಸ್ ಆಸ್ಪತ್ರೆಗೆ ಬಂದು ನಮ್ಮನ್ನು ಭೇಟಿ ಮಾಡಬೇಕು, ಕ್ಷಮೆ ಕೇಳಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.

ಶುಕ್ರವಾರ ಕೋಲ್ಕತ್ತದ ಎಸ್ ಎಸ್ ಕೆಎಂ ಆಸ್ಪತ್ರೆಗೆ ತೆರಳಿದ್ದ ಮಮತಾ ಬ್ಯಾನರ್ಜಿ, "ವೈದ್ಯರನ್ನು ಸಂಧಾನಕ್ಕೆ ಕರೆದರೆ ಅವರು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಆದರೂ ನಾನು ಅವರನ್ನು ಕ್ಷಮಿಸಿದ್ದೇನೆ. ಪ್ರತಿಭಟನೆ ಮಾಡುತ್ತಿರುವವ ವೈದ್ಯರೆಲ್ಲ ಬಂಗಾಳದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ರಾಜ್ಯದಲ್ಲಿ ಶಾಂತಿ ಕದಡಲು ಬಿಜಿಪಿ ಮತ್ತು ಸಿಪಿಎಂ ಮಾಡುತ್ತಿರುವ ಕುತಂತ್ರ ಇದು" ಎಂದು ಆರೋಪಿಸಿದ್ದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ವೈದ್ಯರು, ಮಮತಾ ಬ್ಯಾನರ್ಜಿ ಅವರು ಭೇಷರತ್ ಕ್ಷಮೆ ಕೇಳಬೇಕು, ಇಲ್ಲವೆಂದರೆ ಈ ಹೋರಾಟ ಉಗ್ರರೂಪ ಪಡೆಯಲಿದೆ ಎಂದು ಗುಡುಗಿದ್ದಾರೆ.












Click it and Unblock the Notifications