ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಿಥುನ್ ಚಕ್ರವರ್ತಿ ಹೆಸರೇ ಇಲ್ಲ!
ಕೋಲ್ಕತಾ, ಮಾರ್ಚ್ 23: ಭಾರಿ ಪ್ರಚಾರದೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರಿಗೆ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ. ಬಿಜೆಪಿ ತನ್ನ 13 ಅಭ್ಯರ್ಥಿಗಳ ಕೊನೆಯ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿಯೂ ಮಿಥುನ್ ಚಕ್ರವರ್ತಿ ಹೆಸರಿಲ್ಲ.
ಬಂಗಾಳದ ರಾಶ್‌ಬೆಹಾರಿ ವಿಧಾನಸಭೆ ಕ್ಷೇತ್ರವು ಬಂಗಾಳಿ ಸಿನಿಮಾದ 'ದಾದಾ' ಎಂದೇ ಖ್ಯಾತರಾದ ಮಿಥುನ್ ಚಕ್ರವರ್ತಿ ಅವರಿಗೆ ಮೀಸಲು ಎಂದು ನಂಬಲಾಗಿತ್ತು. ಆದರೆ ಈ ಕ್ಷೇತ್ರದಲ್ಲಿ, ಬಹು ನಿರ್ಣಾಯಕ ವರ್ಷಗಳಲ್ಲಿ ಕಾಶ್ಮೀರದ ಉಸ್ತುವಾರಿ ಹೊತ್ತಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಾಹಾ ಅವರನ್ನು ಕಣಕ್ಕಿಳಿಸಲಾಗಿದೆ.
ಪಶ್ಚಿಮ ಬಂಗಾಳ ಚುನಾವಣೆ:13 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಮಾರ್ಚ್ 7ರಂದು ಕೋಲ್ಕತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದ್ದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಿಥುನ್ ಚಕ್ರವರ್ತಿ ವೇದಿಕೆ ಹಂಚಿಕೊಂಡಿದ್ದರು. ದಕ್ಷಿಣ ಕೋಲ್ಕತಾದ ಮಹತ್ವದ ಸೀಟು ಮಿಥುನ್ ಚಕ್ರವರ್ತಿ ಅವರಿಗೇ ದೊರಕಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು.
ಮಾರ್ಚ್ 30ರಂದು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಪರವಾಗಿ ಮಿಥುನ್ ಚಕ್ರವರ್ತಿ ಪ್ರಚಾರ ನಡೆಸಲಿದ್ದಾರೆ. ಅಂದು ಗೃಹ ಸಚಿವ ಅಮಿತ್ ಶಾ ರೋಡ್ ಶೋದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಉತ್ತರ ಬಂಗಾಳದ ಅಲಿಪುರ್ದೌರ್ ಕ್ಷೇತ್ರದಿಂದ ಈ ಮೊದಲು ಕಣಕ್ಕಿಳಿಸಲಾಗಿದ್ದ ಮಾಜಿ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ ಅವರ ಸ್ಥಾನವನ್ನು ಬದಲಿಸಲಾಗಿದ್ದು, ಅವರನ್ನು ಬಲೂರ್ಘಾಟ್ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.