ಸಂಕಷ್ಟದಲ್ಲಿ ಜೊತೆಯಾದ ವಿಪಕ್ಷಗಳಿಗೆ ಋಣಿ ಎಂದ ದೀದಿ
ಕೋಲ್ಕತ್ತಾ, ಮೇ 16: ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಅವಧಿಯನ್ನು ಮೊಟಕುಗೊಳಿಸಿದ ಚುನಾವಣಾ ಆಯೋಗದ ಆದೇಶದ ವಿರುದ್ಧ ತಮ್ಮೊಂದಿಗೆ ನಿಂತ ವಿಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧನ್ಯವಾದ ಅರ್ಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೇ 19 ರಂದು ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಮೇ 17 ರಂದು ಚುನಾವಣಾ ಪ್ರಚಾರ ಅಂತ್ಯವಾಗಬೇಕಿತ್ತು. ಆದರೆ ಅದನ್ನು ಮೇ 16 ಕ್ಕೇ ಮೊಟಕುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅದಕ್ಕೆ ಕಾರಣ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ಸಮಯದಲ್ಲಿ ಕೋಲ್ಕತ್ತಾದಲ್ಲಿ ನಡೆದ ಹಿಂಸಾಚಾರ ಎಂದು ಚುನಾವಣಾ ಆಯೋಗ ಹೇಳಿದೆ.
ಚುನಾವಣಾ ಆಯೋಗದ ಈ ನಡೆಯನ್ನು ಮಮತಾ ಬ್ಯಾನರ್ಜಿ ಸಂವಿಧಾನ ವಿರೋಧಿ ಎಂದು ದೂರಿದ್ದಾರೆ.
ಬಿಎಸ್ಪಿ ಸುಪ್ರಿಮೋ ಮಾಯಾವತಿ ಅವರು ಈ ಬಗ್ಗೆ ಮಾತನಾಡಿ, "ಮೋದಿ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಕೇಂದ್ರೀಕರಿಸಲು ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಲಾಗುತ್ತಿದೆ. ಪ್ರಚಾರದ ಅವಧಿಯನ್ನು ಮೊಟಕುಗೊಳಿಸುವುದು ಸ್ವೀಕಾರಾರ್ಹ ವಿಚಾರವಲ್ಲ" ಎಂದರು.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ತೆಲುಗು ದೇಶಂ ಪಕ್ಷದ ಮುಖಂಡ ಎನ್ ಚಂದ್ರಬಾಬು ನಾಯ್ಡು ಮತ್ತು ಕಾಂಗ್ರೆಸ್ ಸಹ ಬ್ಯಾನರ್ಜಿ ಅವರಿಗೆ ಬೆಂಬಲ ಸೂಚಿಸಿದ್ದು, ಅದಕ್ಕಾಗಿ ಎಲ್ಲಾ ವಿಪಕ್ಷಗಳಿಗೂ ನಾನು ಋಣಿ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮಾಯಾವತಿ, ಅಖಿಲೇಶ್ ಯಾದವ್, ಕಾಂಗ್ರೆಸ್, ಚಂದ್ರಬಾಬು ನಾಯ್ಡು ಮತ್ತು ಇತರು ಒಗ್ಗಟ್ಟನ್ನು ಪ್ರದರ್ಶಿಸಿ ಬಂಗಾಳದ ಜನರ ಪರವಾಗಿ ನಿಂತಿದ್ದಕ್ಕೆ ಧನ್ಯವಾದಗಳು. ನಾನು ನಿಮಗೆ ಋಣಿ. ಬಿಜೆಪಿ ಮಾರ್ಗದರ್ಶನದಲ್ಲಿ ಚುನಾವಣಾ ಆಯೋಗ ನೀಡಿದ ತಾರತಮ್ಯದ ಆದೇಶ ಪ್ರಜಾಪ್ರಭುತ್ವದ ಮೇಲೆ ಮಾಡಿದ ನೇರ ದಾಳಿ.. ಅದಕ್ಕಾಗಿ ಜನರು ಪಾಠ ಕಲಿಸುತ್ತಾರೆ" ಎಂದಿದ್ದರು.












Click it and Unblock the Notifications