ಪಶ್ಚಿಮ ಬಂಗಾಳ ಗಲಾಟೆ: ಬಿಜೆಪಿಯ ನಾಟಕ ಎಂದ ಮಮತಾ
ಕೋಲ್ಕತಾ, ಡಿಸೆಂಬರ್ 11: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೈಲಾಶ ವಿಜಯ್ ವರ್ಗಿಯಾ ಅವರ ಮೇಲೆ ನಡೆದ ದಾಳಿಯು ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ.
ನಡ್ಡಾ ಮತ್ತು ಇತರೆ ಮುಖಂಡರು ಇದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಆಗ್ರಹಿಸಿದೆ. ಆದರೆ ಬಿಜೆಪಿಯ ಈ ಕಿರುಚಾಟ ದೊಡ್ಡ 'ನೌಟಂಕಿ' (ನಾಟಕ) ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ರೈತರ ಪ್ರತಿಭಟನೆಗಳನ್ನು ಎದುರಿಸಲಾಗದೆ ಮುಜುಗರಕ್ಕೆ ಸಿಲುಕಿರುವ ಬಿಜೆಪಿ, ಈ ರೀತಿಯ ಪ್ರಚಾರ ನಾಟಕಗಳನ್ನು ಆಡುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

'ಬಿಜೆಪಿಗೆ ಜನರು ನಡೆಸುತ್ತಿರುವ ಪ್ರತಿಭಟನೆಗಳನ್ನು ಎದುರಿಸಲು ಆಗುತ್ತಿಲ್ಲ. ಹೀಗಾಗಿ ಮಾಧ್ಯಮಗಳ ಎದುರು ಪ್ರಚಾರಕ್ಕೆ ಈ ನಾಟಕವನ್ನು ಪ್ರಾರಂಭಿಸಿದೆ. ಇದು ಪೂರ್ವ ನಿಯೋಜಿತವೇ? ಅವರು ವಿಡಿಯೋಗಳನ್ನು ಹೇಗೆ ಸಿದ್ಧಮಾಡಿಕೊಂಡಿದ್ದರು? ಅಷ್ಟು ಬಿಎಸ್ಎಫ್ ಮತ್ತು ಸಿಆರ್‌ಪಿಎಫ್ ಇದ್ದಾಗಲೂ ಯಾರೋ ನಿಮ್ಮನ್ನು ಮುಟ್ಟಲು ಹೇಗೆ ಸಾಧ್ಯ?' ಎಂದು ಅವರು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.
ತಾವು ದೆಹಲಿಗೆ ಭೇಟಿ ನೀಡಿದಾಗ ಯಾವಾಗಲೂ ಬಿಜೆಪಿ ಈ ರೀತಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ. 'ನಾನು ದೆಹಲಿಗೆ ಹೋದಾಗ ಅವರು ಏನು ಮಾಡುತ್ತಾರೆ? ಪ್ರತಿ ಬಾರಿ ನಾನು ದೆಹಲಿಗೆ ಭೇಟಿ ನೀಡಿದಾಗಲೆಲ್ಲಾ ಬಿಜೆಪಿ ನನಗೆ ಘೆರಾವ್ ಹಾಕುತ್ತದೆ' ಎಂದು ಹೇಳಿದ್ದಾರೆ.
ಈ ರೀತಿಯ ದುರಾಡಳಿತ ಮತ್ತು ವರ್ತನೆ ಬಂಗಾಳದ ಸಂಸ್ಕೃತಿಯೇ ಅಲ್ಲ. ತಮ್ಮ ಕಾರುಗಳ ಮುಂದೆ ಪೊಲೀಸರ ವಾಹನವಿತ್ತು. ರಾಜ್ಯ ಪೊಲೀಸರ ಮುಂದೆಯೇ ಕಲ್ಲುಗಳನ್ನು ಎಸೆದ ರೀತಿ ಊಹಿಸಲೂ ಆಗುವುದಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.
ಘಟನೆಯಲ್ಲಿ ಕೈಲಾಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಹಿಂದೆ ಮಮತಾ ಬ್ಯಾನರ್ಜಿ ಅವರ ಎಡ ಮತ್ತು ಬಲದಂತಿರುವ ಜಹಾಂಗೀರ್ ಮತ್ತು ಮೂಲಾ ಇರುವುದನ್ನು ಗುರುತಿಸಿದ್ದೇನೆ. ಈ ಮಾಹಿತಿ ಸಿಕ್ಕ ಕೂಡಲೇ ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿ, ಎಸ್‌ಪಿ, ಡಿಜಿ, ಬಂಗಾಳ ರಾಜ್ಯಪಾಲರು ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಇ-ಮೇಲ್ ಮಾಡಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications