ಮಮತಾ ಮೇಲೆ ಹಲ್ಲೆಯೇ ನಡೆದಿಲ್ಲ: ಪ್ರತ್ಯಕ್ಷದರ್ಶಿಗಳ ಹೇಳಿಕೆ
ಕೋಲ್ಕತಾ, ಮಾರ್ಚ್ 11: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣ ತೀವ್ರ ಕೋಲಾಹಲ ಸೃಷ್ಟಿಸಿದೆ.
ಮಮತಾ ಬ್ಯಾನರ್ಜಿ ಅವರು ಸ್ಥಳೀಯರೊಂದಿಗೆ ಮಾತನಾಡುವಾಗ ದುಷ್ಕರ್ಮಿಗಳು ಅವರನ್ನು ತಳ್ಳಾಡಿದ್ದಾರೆ. ಇದರಿಂದ ಮಮತಾ ಅವರ ಕಾಲಿಕೆ ಪೆಟ್ಟಾಗಿದೆ ಎಂದು ಆರೋಪಿಸಲಾಗಿದೆ. ಮಮತಾ ಬ್ಯಾನರ್ಜಿ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಚುನಾವಣಾ ಪ್ರಚಾರದ ವೇಳೆ ನಾಲ್ಕೈದು ಜನರು ತಮ್ಮ ಮೇಲೆ ಹಲ್ಲೆ ನಡೆಸಿದ್ದರಿಂದ ಎಡಗಾಲಿಗೆ ಪೆಟ್ಟಾಗಿದೆ ಎಂದು ಮಮತಾ ಹೇಳಿದ್ದಾರೆ. ಸಂಜೆ 6.15ರ ವೇಳೆಗೆ ಬಿರುಲಿಯಾದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಡುವಾಗ ಈ ದಾಳಿ ನಡೆದಿದೆ ಎಂದಿದ್ದಾರೆ. ಆದರೆ, ಘಟನೆ ವೇಳೆ ಹಾಜರಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಹೇಳುವುದೇ ಬೇರೆ. ಮಮತಾ ಬ್ಯಾನರ್ಜಿ ಅವರನ್ನು ಯಾರೂ ತಳ್ಳಾಡಿಲ್ಲ, ಹಲ್ಲೆ ನಡೆಸಿಲ್ಲ. ಸಣ್ಣದೊಂದು ಅಪಘಾತದಲ್ಲಿ ಗಾಯಗೊಂಡಿದ್ದಾರಷ್ಟೇ ಎಂದು ಅವರು ತಿಳಿಸಿದ್ದಾರೆ.
|
ಯಾರೂ ಮುಟ್ಟೇ ಇಲ್ಲ!
'ಮುಖ್ಯಮಂತ್ರಿಯನ್ನು ನೋಡಲು ದೊಡ್ಡ ಗುಂಪು ಸೇರಿತ್ತು. ಅವರು ಹೊರಡುವಾಗ ಕೆಳಕ್ಕೆ ಬಿದ್ದು ಕುತ್ತಿಗೆ ಹಾಗೂ ಕಾಲಿಗೆ ಪೆಟ್ಟಾಯಿತು. ಆಕೆಯನ್ನು ಯಾರೂ ತಳ್ಳಿಲ್ಲ. ಆಕೆಯನ್ನು ನೋಡಲು ಜನರು ಸೇರಿದ್ದರಷ್ಟೇ. ಕಾರು ನಿಧಾನವಾಗಿ ಚಲಿಸುತ್ತಿತ್ತು' ಎಂದು ವಿದ್ಯಾರ್ಥಿ ಸುಮನ್ ಮೈತಿ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
|
ಹೋರ್ಡಿಂಗ್‌ನಿಂದಾದ ಅಪಘಾತ
'ಅಲ್ಲಿ ಏನಾಯಿತು ಎಂಬುದನ್ನು ನಾನು ನೋಡಿದ್ದೇನೆ. ದೇವಸ್ಥಾನದಿಂದ ಬಂದ ಮಮತಾ, ಬಾಗಿಲು ತೆರೆದು ಕಾರ್‌ನಲ್ಲಿ ಕುಳಿತುಕೊಂಡಿದ್ದರು. ಕಾರ್‌ನ ಮುಂಭಾಗದಲ್ಲಿ ಅಳವಡಿಸಿದ್ದ ಹೋರ್ಡಿಂಗ್ ಬಾಗಿಲಿನ ಮೇಲೆ ಬಿದ್ದಿದೆ. ಅದು ಮಮತಾ ಅವರ ಕುತ್ತಿಗೆ ಮತ್ತು ಕಾಲಿಗೆ ತಾಗಿದೆ. ಆಕೆಗೆ ಯಾರೂ ಹೊಡೆದಿಲ್ಲ' ಎಂದು ಚಿತ್ತರಂಜನ್ ಎಂಬುವವರು ತಿಳಿಸಿದ್ದಾರೆ.
|
ಇದೆಲ್ಲ ದೊಡ್ಡ ನಾಟಕ
ಮಮತಾ ಅವರದ್ದು ಸಣ್ಣದೊಂದು ಅಪಘಾತ. ಅದನ್ನೇ ಅವರು ಪೂರ್ವ ನಿಯೋಜಿತ ಸಂಚು ಎಂಬಂತೆ ಬಿಂಬಿಸಿ ಗದ್ದಲವೆಬ್ಬಿಸಿದ್ದಾರೆ. ಆಕೆಯ ಸುತ್ತಲೂ 24 ಗಂಟೆ ಸಾಕಷ್ಟು ಮಂದಿ ಭದ್ರತಾ ಸಿಬ್ಬಂದಿ ಇರುತ್ತಾರೆ. ಹೀಗಿರುವಾಗ ಅವರನ್ನು ತಳ್ಳಾಡಲು ಸಾಧ್ಯವೇ? ಇದೆಲ್ಲ ದೊಡ್ಡ ನಾಟಕ ಎಂದು ಬಿಜೆಪಿ ಟೀಕಿಸಿದೆ.

ವರದಿಗೆ ಆಯೋಗ ಸೂಚನೆ
ನಂದಿಗ್ರಾಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ದಿನದಂದು ನಡೆದ ಈ ಘಟನೆ ಮತ್ತು ಭದ್ರತಾ ವೈಫಲ್ಯದ ಕುರಿತು ಸಂಪೂರ್ಣ ವರದಿ ನೀಡುವಂತೆ ಚುನಾವಣಾ ಆಯೋಗವು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದೆ. ಹಲ್ಲೆ ಸಂಬಂಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಿತ್ತು.












Click it and Unblock the Notifications