ದ್ವೇಷಪೂರಿತ, ಪ್ರಚೋದನಕಾರಿ ಪತ್ರಕ್ಕಾಗಿ ಟಿಎಂಸಿಗೆ ಆಯೋಗ ಚಾಟಿ
ಕೋಲ್ಕತ್ತಾ, ಮಾರ್ಚ್.11: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ಟಿಎಂಸಿ ಬರೆದ ಪತ್ರಕ್ಕೆ ಚುನಾವಣಾ ಆಯೋಗವು ಆಕ್ಷೇಪ ವ್ಯಕ್ತಪಡಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷವು ಬರೆದ ಪತ್ರವು ದ್ವೇಷಪೂರಿತವಾಗಿದ್ದು, ಪ್ರಚೋದನಕಾರಿ ಅಂಶಗಳನ್ನು ಹೊಂದಿದೆ ಎಂದು ಕೇಂದ್ರ ಚುನಾವಣಾ ಆಯೋಗ ವಾಗ್ದಾಳ ನಡೆಸಿದೆ. "ಚುನಾವಣೆ ಹೆಸರಿನಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಂತ್ರೋಪಕರಣಗಳನ್ನು ಆಯೋಗವು ವಹಿಸಿಕೊಂಡಿದೆ. ಇಡೀ ಆಡಳಿತ ರಚನೆಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಸೂಚಿಸುವುದು ಸಂಪೂರ್ಣ ತಪ್ಪಾಗಿದೆ." ಎಂದು ಆಯೋಗವು ವಾಗ್ದಾಳಿ ನಡೆಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದು, ನಂದಿಗ್ರಾಮ್ನಲ್ಲಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಿಯೋಗ ಕಳುಹಿಸಿದ ಮನವಿ ಪತ್ರಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ.

ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪ
ಪಶ್ಚಿಮ ಬಂಗಾಳದ ಬಿರುಲಿಯಾ ಬಜಾರ್‌ನಲ್ಲಿ ಸ್ಥಳೀಯರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತರು ನನ್ನನ್ನು ತಳ್ಳಿದ್ದರಿಂದ ನನ್ನ ಕಾಲಿಗೆ ಗಾಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಘಟನೆ ಬಳಿಕ ಗಾಯಗೊಂಡ ಅವರನ್ನು ಕೋಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ವಿಡಿಯೋ ಮೂಲಕ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ ಮಮತಾ ಬ್ಯಾನರ್ಜಿ ಅವರು ಶಾಂತಿಯುತವಾಗಿ ವರ್ತಿಸುವಂತೆ ಮನವಿ ಮಾಡಿಕೊಂಡಿದ್ದರು.

ತೃಣೂಲ ಕಾಂಗ್ರೆಸ್ ಆರೋಪಕ್ಕೆ ಆಯೋಗ ಕೆಂಡಾಮಂಡಲ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸನ್ನದ್ಧತೆ ಬಗ್ಗೆ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗವು ರಾಜ್ಯದ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ವಿರೇಂದ್ರ ಅವರನ್ನು ಬದಲಾಯಿಸುವ ನಿರ್ಧಾರದ ಬಗ್ಗೆ ಆದೇಶಿಸಿತ್ತು. ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕ ವೀರೇಂದ್ರ ಸ್ಥಾನಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿ. ನಿರಜ್ನಾಯನ್ ಅವರನ್ನು ನೇಮಿಸಿ ಆದೇಶಿಸಿದೆ. ನೂತನ ಡಿಜಿಪಿಯವರಿಗೆ ರಾಜ್ಯ ಚುನಾವಣೆ ಸಿದ್ಧತೆಗೆ ಸಂಬಂಧಿಸಿದ ಹೊಣೆಯನ್ನು ವಹಿಸಲಾಗಿತ್ತು. ಈ ಹಿನ್ನೆಲೆ ನಂದಿಗ್ರಾಮ್ ನಲ್ಲಿ ನಡೆದ ಘಟನೆಯ ಹೊಣೆಯನ್ನು ಆಯೋಗವೇ ಹೊತ್ತುಕೊಳ್ಳಬೇಕು ಎಂಬ ಧಾಟಿಯಲ್ಲಿ ಪತ್ರದಲ್ಲಿ ಬರೆಯಲಾಗಿತ್ತು.

ಜ್ಞಾಪಕ ಪತ್ರದಲ್ಲಿ ಆಯೋಗದ ವಿರುದ್ಧವೇ ಬೊಟ್ಟು
ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿರುವ ಘಟನೆಯು ಆಕಸ್ಮಿಕವಾಗಿದೆ. ಈ ಕುರಿತು ಅಗತ್ಯ ರೀತಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಆಯೋಗ ತಿಳಿಸಿದೆ. ಇದಲ್ಲದೇ, ತೃಣಮೂಲ ಕಾಂಗ್ರೆಸ್ ಆಯೋಗಕ್ಕೆ ನೀಡಿರುವ ಪತ್ರವು ಪ್ರಚೋದನಾಕಾರಿ ಅಂಶ ಮತ್ತು ಅವ್ಯವಹಾರಗಳಿಂದಲೂ ತುಂಬಿರುವುದು ದುರಾದೃಷ್ಟಕರವಾಗಿದೆ ಎಂದು ಆಯೋಗ ತಿಳಿಸಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಆರೋಪವೇನು?
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೂಕ್ತ ರೀತಿಯ ಭದ್ರತೆ ಒದಗಿಸುವಲ್ಲಿ ಚುನಾವಣಾ ಆಯೋಗವು ವಿಫಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿನ ವೈಫಲ್ಯಕ್ಕೆ ಆಯೋಗವೇ ಹೊಣೆ ಆಗಿರುತ್ತದೆ. ಬಂಗಾಳದಲ್ಲಿ ಈ ಮೊದಲ ಕಾನೂನು ಸುವ್ಯವಸ್ಥೆಯ ಸರಿಯಾದ ರೀತಿಯಲ್ಲಿತ್ತು. ಆದರೆ ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಆಯೋಗದ ವ್ಯಾಪ್ತಿಗೆ ಬರುತ್ತದೆ. ಈ ಅವಧಿಯಲ್ಲೇ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ವೀರೇಂದ್ರ ಅವರನ್ನು ಆಯೋಗವು ಬದಲಾಯಿಸಿದೆ ಎಂದು ಟಿಎಂಸಿ ಪಕ್ಷದ ಕಾರ್ಯದರ್ಶಿ ಪಾರ್ಥಾ ಚಟರ್ಜಿ ಆರೋಪಿಸಿದ್ದಾರೆ.

8 ಹಂತಗಳಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಮತದಾನ
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ.2ರಂದು ಹೊರ ಬೀಳಲಿದೆ.












Click it and Unblock the Notifications