ಸೀರೆ ಸಭ್ಯತೆಯ ಸಂಕೇತ: 'ಬರ್ಮುಡಾ' ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ಅಧ್ಯಕ್ಷ
ಕೋಲ್ಕತಾ, ಮಾರ್ಚ್ 25: ತಮ್ಮ ಕಾಲುಗಳನ್ನು ಪ್ರದರ್ಶಿಸಲು ಮಮತಾ ಬ್ಯಾನರ್ಜಿ ಅವರು ಸೀರೆ ಬಿಚ್ಚಿ ಬರ್ಮುಡಾ ಚಡ್ಡಿ ಧರಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ಮೂಲಕ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಗುರುವಾರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
'ಮಮತಾ ಬ್ಯಾನರ್ಜಿ ನಮ್ಮ ಮುಖ್ಯಮಂತ್ರಿ. ಅವರೊಬ್ಬ ಮಹಿಳೆ. ನಾವು ಬಂಗಾಳದ ಸಂಸ್ಕೃತಿಯೊಂದಿಗೆ ಬೆರೆತ ಶಿಷ್ಟಾಚಾರವನ್ನು ಅವರಿಂದ ನಿರೀಕ್ಷಿಸುತ್ತೇವೆ. ಸೀರೆ ಉಡುವ ಒಬ್ಬ ಮಹಿಳೆ ನಿರಂತರವಾಗಿ ತಮ್ಮ ಕಾಲನ್ನು ತೋರಿಸುತ್ತಿರುವುದು ಸಭ್ಯತೆಯಲ್ಲ. ಇದು ನನಗೆ ಆಕ್ಷೇಪಾರ್ಹವಾಗಿ ಕಂಡಿತು. ಹೀಗಾಗಿ ನಾನು ಅದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದೇನೆ' ಎಂದು ಘೋಷ್ ಹೇಳಿದ್ದಾರೆ.
ಇದು ಇತರೆ ಮಹಿಳೆಯರಿಗೂ ಅನ್ವಯಿಸುತ್ತದೆ. ಇದು ಯಾರಿಗೂ ಸರಿ ಕಾಣುವುದಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

'ಪಶ್ಚಿಮ ಬಂಗಾಳದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಸೀರೆ ಉಡುತ್ತಾರೆ. ಸೀರೆಯು ಸಭ್ಯತೆಯ ಸಂಕೇತ. ಆದರೆ ಒಬ್ಬರು ಸಾರ್ವಜನಿಕ ಸಭೆಗಳಲ್ಲಿ ಸೀರೆ ಉಟ್ಟಾಗಲೂ ಉದ್ದೇಶಪೂರ್ವಕವಾಗಿ ಪದೇ ಪದೇ ತಮ್ಮ ಕಾಲನ್ನು ತೋರಿಸುವುದು ಸರಿಯಾದ ನಡೆಯಲ್ಲ. ಮಹಿಳೆಯರು ಇದನ್ನು ಇಷ್ಟಪಡುತ್ತಿಲ್ಲ. ನಾನು ಇದನ್ನು ಪ್ರಶ್ನಿಸಿದ್ದೇನೆ. ಏಕೆಂದರೆ ಇದು ಬಂಗಾಳದ ಸಂಸ್ಕೃತಿಗೆ ಸರಿ ಹೊಂದುತ್ತಿಲ್ಲ. ಬಂಗಾಳ ಸಂಸ್ಖೃತಿ ಬಗ್ಗೆ ಮುಖ್ಯಮಂತ್ರಿ ತುಂಬಾ ಮಾತನಾಡುತ್ತಾರೆ. ನಾವು ಮುಖ್ಯಮಂತ್ರಿಯಿಂದ ಈ ರೀತಿಯ ವರ್ತನೆಯನ್ನು ನಿರೀಕ್ಷಿಸುವುದಿಲ್ಲ' ಎಂದು ಘೋಷ್ ಹೇಳಿದ್ದಾರೆ.
'ನನ್ನ ಹೇಳಿಕೆ ಮಹಿಳೆಯರ ವಿರುದ್ಧ ಅಲ್ಲ. ಇದರಲ್ಲಿ ಯಾವ ವಿವಾದವೂ ಇಲ್ಲ. ಇದಕ್ಕೆ ಸ್ಪಷ್ಟೀಕರಣದ ಅಗತ್ಯವೂ ಇಲ್ಲ. ನಾನು ಇದನ್ನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದೇನೆ' ಎಂದು ಸಮರ್ಥಿಸಿಕೊಂಡರು.












Click it and Unblock the Notifications