ಬಿಜೆಪಿ ನಾಯಕರಲ್ಲಿ ಸಭ್ಯತೆ, ಸೌಜನ್ಯ, ನಾಗರಿಕತೆಯೇ ಇಲ್ಲ ಎಂದ ದೀದಿ: ಕಾರಣ ಓದಿ
ಕೋಲ್ಕತ್ತಾ, ಜುಲೈ 06: ಭಾರತೀಯ ಜನತಾ ಪಕ್ಷದಲ್ಲಿ ಸೌಜನ್ಯ ಹಾಗೂ ಸಭ್ಯತೆಯೇ ಉಳಿದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲ ಜಗದೀಪ್ ಧನಕರ್ ಉದ್ಘಾಟನಾ ಭಾಷಣದ ನಂತರ ಮಂಗಳವಾರ ಮಮತಾ ಬ್ಯಾನರ್ಜಿ ಮಾತನಾಡಿದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಗದ್ದಲದ ನಡುವೆ ರಾಜ್ಯಪಾಲರು 18 ಪುಟಗಳ ಭಾಷಣ ಮಾಡಿದರು. ಈ ವೇಳೆ ಹಿಂಸಾಚಾರದ ಬಗ್ಗೆಯೂ ಉಲ್ಲೇಖಿಸಿದ್ದರು.
ಮಂಗಳವಾರ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. "ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಆಯ್ಕೆ ಮಾಡಿ ಕಳುಹಿಸಿರುವ ರಾಜ್ಯಪಾಲರ ಭಾಷಣವನ್ನು ಶಾಂತವಾಗಿ ಕುಳಿತುಕೊಂಡು ಆಲಿಸುವ ಸೌಜನ್ಯ ಬಿಜೆಪಿಗರಲ್ಲಿ ಇಲ್ಲ," ಎಂದು ಕಿಡಿ ಕಾರಿದರು.

ಮೊದಲಿನ ಬಿಜೆಪಿ ಹಾಗೂ ಪ್ರಸುತ ಬಿಜೆಪಿಯೇ ಬೇರೆ:
"ನಾನು ರಾಜನಾಥ್ ಸಿಂಗ್ ರಿಂದ ಸುಷ್ಮಾ ಸ್ವರಾಜ್ ವರೆಗಿನ ಬಿಜೆಪಿ ನಾಯಕರನ್ನು ನೋಡಿದ್ದೇನೆ. ಆದರೆ ಇಂದಿನ ಬಿಜೆಪಿಯೇ ಬೇರೆಯಾಗಿದೆ. ಈಗಿನ ಬಿಜೆಪಿ ನಾಯಕರಿಗೆ ಸಂಸ್ಕೃತಿ, ಸಭ್ಯತೆ, ಸೌಜನ್ಯ ಹಾಗೂ ನಾಗರಿಕತೆಯೇ ತಿಳಿದಿಲ್ಲ," ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ ಕಾರಿದರು.












Click it and Unblock the Notifications