ಎಲ್ಲವೂ ಬಡ್ಡಿ ಸಮೇತ ವಾಪಸ್ ಬರಲಿದೆ; ಮಮತಾಗೆ ದಿಲೀಪ್ ಘೋಷ್ ಎಚ್ಚರಿಕೆ
ಕೋಲ್ಕತ್ತಾ, ಡಿಸೆಂಬರ್ 11: ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯ ನಂತರ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ನಡುವೆ ಮಾತುಗಳ ಸಮರವೇ ಆರಂಭವಾಗಿದೆ. ಇದೀಗ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸಿಎಂ ಮಮತಾ ಬ್ಯಾನರ್ಜಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ದಿಲೀಪ್ ಘೋಷ್, "ನಾವು ಬದಲಾಗುವೆವು, ಜೊತೆಗೆ ಸೇಡನ್ನೂ ತೀರಿಸಿಕೊಳ್ಳುವೆವು. ಎಲ್ಲವೂ ಬಡ್ಡಿ ಸಮೇತ ವಾಪಸ್ ಬರಲಿದೆ" ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 2011ರಲ್ಲಿ ಸಿಎಂ ಮಮತಾ ಬ್ಯಾನರ್ಜಿ, "ಬದಲಾವಣೆ ಬೇಕು, ದ್ವೇಷವಲ್ಲ" ಎಂಬ ಘೋಷಣೆಯನ್ನು ಮಾಡಿದ್ದರು. ಆದರೆ ಗುರುವಾರ ನಡೆದ ಘಟನೆಯಿಂದ ಟಿಎಂಸಿ-ಬಿಜೆಪಿ ನಡುವಿನ ವಾಗ್ವಾದ ಬಿಸಿಯೇರಿದೆ.
ದಿಲೀಪ್ ಘೋಷ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸಯಂತನ್ ಬಸು, "ನೀವು ಒಬ್ಬರನ್ನು ಸಾಯಿಸಿದರೆ, ನಾವು ನಾಲ್ವರನ್ನು ಸಾಯಿಸುತ್ತೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್ ಹಾಗೂ ಪ್ರತಿಕ್ರಿಯೆಗಳು ಎರಡೂ ಪಕ್ಷಗಳ ನಡುವಿನ ಕಿಡಿಯನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದ ನಡ್ಡಾ, "ಚುನಾಯಿತ ಪ್ರತಿನಿಧಿಗಳೇ ಇಲ್ಲಿ ಸುರಕ್ಷಿತವಾಗಿಲ್ಲ ಎಂದರೆ ಸಾಮಾನ್ಯ ಜನರ ಕಥೆಯೇನು? ಇಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಇಡೀ ವ್ಯವಸ್ಥೆಯೇ ನಾಶವಾಗಿ ಹೋಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ ಈ ಘಟನೆಗೆ ಪ್ರತಿಕ್ರಿಯಿಸಿ, ಇದು ಪ್ರಾಯೋಜಿತ ಕೃತ್ಯ ಎಂದಿದ್ದರು.
ಈ ಘಟನೆ ಕುರಿತು ಸುದೀರ್ಘ ವರದಿ ನೀಡುವಂತೆ ರಾಜ್ಯಪಾಲ ಜಗದೀಪ್ ಧಾಂಕರ್ ಅವರಿಗೆ ಸರ್ಕಾರ ಸೂಚಿಸಿದೆ.

ಗುರುವಾರ ಕೋಲ್ಕತ್ತದಿಂದ ಪ.ಬಂಗಾಳದ ಡೈಮಂಡ್ ಹಾರ್ಬರ್ ಗೆ ತೆರಳುತ್ತಿದ್ದ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೂ ಕಲ್ಲು ತೂರಾಟ ನಡೆದಿತ್ತು. ಬಂಗಾಳ ಚುನಾವಣೆ 2021ರ ಸಲುವಾಗಿ ಪಕ್ಷದ ಸಭೆಗೆ ಹಾಜರಾಗಲು ಮುಖಂಡರು ತೆರಳುತ್ತಿದ್ದ ಸಂದರ್ಭ ಪ್ರತಿಭಟನಾಕಾರರು ಕಲ್ಲು ತೂರಿದ್ದು, ಇದು ಟಿಎಂಸಿ ಕೃತ್ಯ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. "ಈ ಘಟನೆಯಿಂದ ಟಿಎಂಸಿ ನಿಜ ಬಣ್ಣ ಬಯಲಾಗಿದೆ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್ ಘೋಷ್ ಪ್ರತಿಕ್ರಿಯಿಸಿದ್ದರು.











Click it and Unblock the Notifications