Kolar: ಸಿದ್ದರಾಮಯ್ಯ ಕ್ಷೇತ್ರ ಬಿಟ್ಟರೂ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿದೆ ಚಿನ್ನದ ನಾಡು ಕೋಲಾರ
ಕೋಲಾರ, ಏಪ್ರಿಲ್. 29: ಚಿನ್ನದ ಜಿಲ್ಲೆ ಕೋಲಾರ ಈ ಬಾರಿ ಹೆಚ್ಚು ಸುದ್ದಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣಕ್ಕೆ ಇಳಿಯುತ್ತಾರೆ ಎಂಬ ವಿಷಯದಿಂದ. ಆದರೆ, ಅವರಿಗೆ ಕಾಂಗ್ರೆಸ್ ಹೈಕಮಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊತ್ತನೂರು ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ.
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತವಿತ್ತು. ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಕೆ.ಎಚ್ ಮುನಿಯಪ್ಪ ಅವರು ಏಳು ಭಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವರೂ ಆಗಿದ್ದು ದಲಿತ ಸಮುದಾಯದವರಾದ ಅವರು ಕೋಲಾರದಾದ್ಯಂತ ತಮ್ಮದೇ ಆದ ಹಿಡಿತ ಹೊಂದಿದವರು. ವಿಧಾನಸಭೆಯಲ್ಲಿ ಈ ಭಾಗದಿಂದ ಮೂರು ಮಂದಿ ಮುಸ್ಲಿಂ ಅಭ್ಯರ್ಥಿಗಳು ಆರಿಸಿ ಬಂದದ್ದರು. ಕಾಂಗ್ರೆಸ್ ಕೊಟೆಯನ್ನು ಆಗಾಗ ಪಕ್ಷೇತರ ಅಭ್ಯರ್ಥಿಗಳು ತಪ್ಪಿಸಿದ್ದನ್ನು ಬಿಟ್ಟರೆ ಕಳೆದ 2018 ರಲ್ಲಿ ಜೆಡಿಎಸ್ ಇಲ್ಲಿ ತನ್ನ ಬಾವುಟ ಹಾರಿಸಿದೆ.

ಜೆಡಿಎಸ್‌ನ ಕೆ.ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್ ಸೈಯ್ಯದ ಜಮೀರ್ ಪಾಶಾ ಅವರ ವಿರುದ್ಧ ಬರೋಬ್ಬರಿ 44,000ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಈ ಭಾರಿ ಜೆಡಿಎಸ್ ಸಿ.ಎಂ.ಆರ್. ಶ್ರೀನಾಥ್ ಎಂಬುವವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಕೊತ್ತೂರು ಜಿ ಮಂಜುನಾಥ್ ಮತ್ತು ಬಿಜೆಪಿ ಅಳೆದು ತೂಗಿ ಆರ್. ವರ್ತೂರು ಪ್ರಕಾಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಸಿದ್ದರಾಮಯ್ಯ ಅವರು ಇಲ್ಲಿಂದ ಟಿಕೆಟ್ ಬಯಸಿದ್ದರೂ ಕೂಡ ಕಾಂಗ್ರೆಸ್ ಕೊತ್ತೂರು ಜಿ ಮಂಜುನಾಥ್ ಅವರನ್ನು ಆಯ್ಕೆ ಮಾಡಿದೆ. ಕೊತ್ತೂರು ಜಿ ಮಂಜುನಾಥ್ ಕೂಡ ಸಿದ್ದರಾಮಯ್ಯ ಇಲ್ಲಿಂದ ಕಣಕ್ಕೆ ಇಳಿಯಬೇಕು ಎಂದು ಬಯಸಿದ್ದರು. ಆದರೆ ಒಬ್ಬರಿಗೆ ಒಂದೇ ಹುದ್ದೆ, ಸ್ಥಾನದ ನಿಯಮದಲ್ಲಿ ಕಾಂಗ್ರೆಸ್ ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯಗೆ ನೀಡಿದೆ.

ಕೋಲಾದರಲ್ಲಿ ಈ ಬಾರಿ ಮೂವರ ನಡುವೆ ಟಫ್ ಫೈಟ್ ಕಾಣಿಸುತ್ತಿದೆ.
*ಬಿಜೆಪಿ ಅಭ್ಯರ್ಥಿ ಆರ್. ವರ್ತೂರು ಪ್ರಕಾಶ್* : ಆರ್. ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಗೆಡಿಯಲ್ಲಿ ಪಳಗಿದ ನಾಯಕ. ಮಾಜಿ ಸಿಎಂ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ವಿಷಯ ಹರಿದಾಡುತ್ತಿದ್ದ ಬೆನ್ನಲ್ಲೇ ಬಿಜೆಪಿ ಅಳೆದು ತೂಗಿ ಇವರನ್ನು ಕಣಕ್ಕೆ ಇಳಿಸಿತ್ತು. ವರ್ತೂರು ಪ್ರಕಾಶ್ ಕಾಂಗ್ರೆಸ್ ನಲ್ಲಿದ್ದವರು. ಬಿಜೆಪಿ ಸೇರಿದ್ದ ಅವರಿಗೆ ಕೋಲಾರದಿಂದ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಅವರಿಗೆ 35,544 ಮತಗಳು ದಕ್ಕಿದ್ದವು. ಅದರೆ, ಈ ಬಾರಿ ಬಿಜೆಪಿಯ ಬೆಂಬಲ ಮತ್ತು ಪಕ್ಕಷದ ಜಿಲ್ಲೆಯ ಶಾಸಕ ಕೆ.ಸುಧಾಕರ್ ಅವರ ಬೆಂಬಲ ಹೆಚ್ಚಾಗಿದ್ದು, ಚುಣಾವಣೆಯಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದಾರೆ.
*ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್*: ತಾವು ಕೋಲಾರದಿಂದ ಕಣಕ್ಕಿಳಿಯಲು ಸಾಧ್ಯವಿಲ್ಲದಿದ್ದರೇ ಕೊತ್ತೂರು ಮಂಜುನಾಥ್‌ಗೆ ಟಿಕೆಟ್ ನಿಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು ಎನ್ನಲಾಗುತ್ತಿದೆ. ಹೈಕಮಾಂಡ್ ಅವರಿಗೆ ಟಿಕೆಟ್ ಕೂಡ ಘೋಷಣೆ ಮಾಡಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೇ ಕೊತ್ತೂರು ಮಂಜುನಾಥ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಆಪ್ತ ಶಿಷ್ಯ.

ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕೊತ್ತೂರು ಜಿ ಮಂಜುನಾಥ್, ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ಎಲ್ಲರನ್ನ ಕರೆದು ವಿಶ್ವಾಸಕ್ಕೆ ಪಡೆದು ಸ್ಪರ್ಧೆಗೆ ಸೂಚಿಸಿದರೆ ನಾನು ಒಪ್ಪುತ್ತೇನೆ. ನನ್ನ ಬಳಿ ಯಾರೂ ಮಾತುಕತೆ ನಡೆಸಿಲ್ಲ ಹೈಕಮಾಂಡ್ ನನ್ನ ಹೆಸರು ಘೋಷಣೆ ಮಾಡಿದೆ. ನಾನು ಸಹ ತಯಾರಿಯಲ್ಲಿದ್ದೇನೆ ಎಂದಿದ್ದಾರೆ.
ಈ ಬಾರಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಬದಲಿಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿದ್ದು, ಸ್ಪರ್ಧೆ ಮಾಡುತ್ತಿರುವಂತಹ ಕೊತ್ತೂರು ಮಂಜುನಾಥ್ ಅವರು ಈ ಹಿಂದೆ ದಲಿತರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದಂತಹ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದರಿಂದಾಗಿ ಜೆಡಿಎಸ್ ಕಾರ್ಯಕರ್ತರು ಕೊತ್ತೂರು ದಲಿತರ ವಿರೋಧಿ ಎಂದು ಪ್ರಚಾರ ಮಾಡುತ್ತಿದ್ದಾರೆ.

*ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್*: ಕಳೆದ ಬಾರಿ ಜೆಡಿಎಸ್‌ನ ಕೆ..ಶ್ರೀನಿವಾಸ್ ಗೌಡ ಅವರು 44,000ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಎಚ್,ಡಿ ಕುಮಾರಸ್ವಾಮಿ ಸಿ.ಎಂ.ಆರ್. ಶ್ರೀನಾಥ್ ಅವರನ್ನು ಕಣಕ್ಕಿಳಿಸಿದ್ದಾರೆ. ಗೆಲ್ಲುವ ವಿಶ್ವಾಸದಲ್ಲಿರುವ ಅವರು, 4 ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಜನ ನನ್ನನ್ನು ಕೈ ಬಿಡುವುದಿಲ್ಲ ಎನ್ನುತ್ತಾರೆ.
ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಿಂದಲೂ ಕೆಲಸ ಮಾಡುತ್ತಿದ್ದೇನೆ. ಪಕ್ಷ ಒಬ್ಬ ಸಾಮಾನ್ಯ ಕಾರ್ಯಕರ್ತನಿಕೆ ಟಿಕೆಟ್ ನೀಡಿದೆ. ಪಕ್ಷದ ಯಾವುದೇ ಮತಗಳು ಚದುರಿ ಹೋಗುವುದಿಲ್ಲ. ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ನಾನೇ ಗೆಲ್ಲುತ್ತೇನೆ ಎಂದು ಸಿ.ಎಂ.ಆರ್. ಶ್ರೀನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿ.ಎಂ.ಆರ್. ಶ್ರೀನಾಥ್ ಬಗ್ಗೆ ಕ್ಷೇತ್ರದಲ್ಲಿ ವಿದ್ಯಾವಂತ ಮತ್ತು ಸಭ್ಯಸ್ಥ ಅಭ್ಯರ್ಥಿ ಎಂಬ ಮಾತುಗಳಿವೆ. ಜೊತೆಗೆ ಟಮೋಟೊ ವ್ಯಾಪಾರ ಮಾಡುವ ಇವರು ರೈತರಿಂದ ಕಮಿಷನ್ ಪಡೆಯುತ್ತಾರೆ ಎಂಬ ಹೊಸ ಆರೋಪ ಕೇಳಿ ಬರುತ್ತಿದೆ.












Click it and Unblock the Notifications