Lok Sabha Election: ಕೋಲಾರ ಲೋಕಸಭೆ ಚುನಾವಣೆ 2024: ಕೈ ಟಿಕೆಟ್‌ಗೆ ಬಲಗೈ ಕೂಗು- ಕೆಎಚ್‌ಗೆ ಪುತ್ರ ಸ್ಪರ್ಧಿಸುವ ಇಂಗಿತ
ಕೋಲಾರ ಫೆಬ್ರವರಿ 8: ಕೋಲಾರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ವೀಕ್ಷಕರ ಸಭೆ ನಡೆದ ಬೆನ್ನಲ್ಲಿ ಈ ಬಾರಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಬಲವಾದ ಕೂಗು ಕೇಳಿಬಂದಿದೆ.
ಚುನಾವಣೆಗೆ ಕಾಂಗ್ರೆಸ್ ಪಕ್ಷವು ಅಣಿಯಾಗಿದ್ದು, ಕಳೆದ ಬಾರಿ ಕೈ ತಪ್ಪಿರುವ ಕ್ಷೇತ್ರವನ್ನು ಈ ಬಾರಿ ತೆಕ್ಕೆಗೆ ಪಡೆದುಕೊಳ್ಳಬೇಕು ಎಂದು ನಿಶ್ಚಯಿಸಿದೆ. ಬೆಂಗಳೂರು ಹಾಗೂ ಕೋಲಾರದಲ್ಲಿ ಈಗಾಗಲೇ ಎರಡು ಮೂರು ಸಭೆಗಳು ನಡೆಸಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುವಂತೆ ವೀಕ್ಷಕರ ತಂಡ ಸ್ಥಳೀಯ ನಾಯಕರಿಗೆ ತಿಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೆ ಮೊದಲಿನಿಂದಲೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಎಸ್‌ಸಿ ಬಲಗೈ ಸಮುದಾಯದವರು ಈ ಬಾರಿ ನಮ್ಮ ಸಮುದಾಯದ ನಾಯಕರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳ ಜೊತೆಗೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದು ಕ್ಷೇತ್ರದಲ್ಲಿ. ಕ್ಷೇತ್ರದಲ್ಲಿ ಒಟ್ಟು 16.31 ಲಕ್ಷ ಮತದಾರರಿದ್ದು. ಇದರಲ್ಲಿ 86,000 ಎಡಗೈ 3.60 ಲಕ್ಷ ಬಲಗೈ ಹಾಗೂ 90,000 ಭೋವಿ ಜನಾಂಗದ ಮತದಾರವಿದ್ದು, 85 ಸಾವಿರ ಪರಿಶಿಷ್ಟ ಜನಾಂಗದ ಮತದಾರರಿದ್ದಾರೆ. ಹೀಗಾಗಿ ಜನಸಂಖ್ಯೆ ಆಧಾರದ ಮೇಲೆ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದ್ದಾರೆ. ಬಲಗೈ ಸಮುದಾಯವೂ ಬಿಜೆಪಿ ತತ್ವ ಸಿದ್ಧಾಂತಗಳಿಂದ ದೂರಯಿತ್ತು. ಆದರೆ ಬಲಗೈ ಸಮುದಾಯಕ್ಕೆ ಈವರೆಗೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಕಾರಣಕ್ಕಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಬಲಗೈ ಜನಾಂಗದ ಬಿಜೆಪಿ ಅಭ್ಯರ್ಥಿಯನ್ನು ಸಮುದಾಯ ಬೆಂಬಲಿಸಿತ್ತು.
1952ರಿಂದ 1967ರವರೆಗೆ ಕಾಂಗ್ರೆಸ್‌ನಿಂದ ದೊಡ್ಡತಿಮ್ಮಯ್ಯ ಎಂಬುವವರು ಸಂಸದರಾಗಿ ಮೂರು ಬಾರಿ ಆಯ್ಕೆ ಆಗಿದ್ದರು. ಇವರು ಎಡಗೈ ಸಮುದಾಯವರು. 1967ರಿಂದ 1984ರವರೆಗೆ ಕಾಂಗ್ರೆಸ್‌ನಿಂದ ಜಿ.ವೈ.ಕೃಷ್ಣನ್ (ಭೋವಿ), 1984ರಿಂದ 1989ರವರೆಗೆ ಜನತಾ ಪಕ್ಷದಿಂದ ವಿ.ವೆಂಕಟೇಶ್ (ಭೋವಿ), 1989ರಿಂದ 1991ರ ತನಕ ಕಾಂಗ್ರೆಸ್‌ನಿಂದ ವೈ. ರಾಮಕೃಷ್ಣ (ಎಡಗೈ ಸಮುದಾಯ) ಹಾಗೂ 1991ರಿಂದ 2019ರ ತನಕ ಸತತವಾಗಿ 7 ಬಾರಿ ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ನಿಂದ ಸಂಸದರಾಗಿ ಆಯ್ಕೆ ಆಗಿ ಕೇಂದ್ರ ಸಚಿವರೂ ಆಗಿದ್ದರು.
2019ರ ಚುನಾವಣೆಯಲ್ಲಿ ಬಲಗೈ ಸಮುದಾಯದ ಬಿಜೆಪಿ ಅಭ್ಯರ್ಥಿ ಎನ್.ಮುನಿಸ್ವಾಮಿ ಆಯ್ಕೆ ಆಗುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದರು. ಈವರೆಗೂ ಕಾಂಗ್ರೆಸ್‌ನಿಂದ ಬಲಗೈ ಸಮುದಾಯಕ್ಕೆ ಎಂಪಿ ಟಿಕೆಟ್ ನೀಡಿಲ್ಲ. ಹೆಚ್ಚು ಮತದಾರರಿದ್ದು, 3.60 ಲಕ್ಷ ಬಲಗೈ ಜನಾಂಗದ ಮತದಾರರಿದ್ದಾರೆ. ಕಾಂಗ್ರೆಸ್ ಬೆಂಬಲ ನೀಡಿದರೂ ಟಿಕೆಟ್ ನೀಡದ್ದಕ್ಕೆ ಅಸಮಾಧಾನ ಇದೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಗೆಲುವು ಕಂಡಿದ್ದ ಮುನಿಯಪ್ಪ, ಕಳೆದ ಚುನಾವಣೆಯಲ್ಲಿ ಸೋತಿದ್ದ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಅವರ ಅಭಿಮಾನಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಕಳೆದ ಬಾರಿ ಭಿನ್ನಾಭಿಪ್ರಾಯಗಳಿಂದ ಸೋಲಬೇಕಾಯಿತು ಎಂಬ ವಾದವನ್ನು ಸಹ ಮಂಡಿಸಿದ್ದಾರೆ.
ಈ ಬಾರಿ ಕೋಲಾರ ಲೋಕಸಭಾ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ, 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬ ವಾದವನ್ನು ಕಾಂಗ್ರೆಸ್ ಗೆಲುವಿಗೆ ವರಿಷ್ಠರ ಮುಂದಿಟ್ಟಿದ್ದಾರೆ.
ಆದರೆ ಕೆ. ಎಚ್. ಮುನಿಯಪ್ಪ ಅವರು ರಾಜ್ಯ ಸರಕಾರದಲ್ಲಿ ಸಚಿವ ಆಗಿರುವುದರಿಂದ ಹೈಕಮಾಂಡ್ ಹಾಗೂ ಸ್ಥಳೀಯರು ಒಮ್ಮತದ ಅಭಿಪ್ರಾಯ ಸೂಚಿಸಿದರೆ ಮಗನನ್ನು ಸ್ಪರ್ಧೆಗಿಳಿಸುವ ಲೆಕ್ಕಚಾರದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರ ಕಾಂಗ್ರೆಸ್ ಭದ್ರಕೋಟೆ:--
ಸತತವಾಗಿ 7 ಬಾರಿ ಕಾಂಗ್ರೆಸ್ ಪಕ್ಷದ ಸಂಸದರಾಗಿ ಜಯಶೀಲರಾಗಿರುವುದನ್ನು ನೋಡಿದರೆ ಈ ಕ್ಷೇತ್ರವು ಕಾಂಗ್ರೆಸ್ ನ ಭದ್ರಕೋಟೆ ಎಂದು ತಿಳಿಯುತ್ತದೆ. ಮೀಸಲು ಲೋಕಸಭಾ ಕ್ಷೇತ್ರದಲ್ಲಿ 1952ರಿಂದಲೂ ಈವರೆಗೆ 2 ಬಾರಿ ಬಿಟ್ಟರೆ ಉಳಿದೆಲ್ಲ ಬಾರಿ ಕಾಂಗ್ರೆಸ್‌ನಿಂದಲೇ ಸಂಸದರು ಆಯ್ಕೆ ಆಗುತ್ತಿದ್ದಾರೆ. ಪರಿಶಿಷ್ಟ ಜಾತಿಯ ಒಳಜಾತಿಗಳಾದ ಭೋವಿ ಮತ್ತು ಎಡಗೈ ಜನಾಂಗಕ್ಕೆ ಕಾಂಗ್ರೆಸ್ ಪಕ್ಷದಿಂದ ಇದುವರೆಗೂ ಟಿಕೆಟ್ ನೀಡಲಾಗಿದೆ. ಜಿ.ವೈ.ಕೃಷ್ಣನ್ ಮತ್ತು ವಿ.ವೆಂಕಟೇಶ್ ಭೋವಿ ಸಮುದಾಯದವರು ದೊಡ್ಡತಿಮ್ಮಯ್ಯ ಮತ್ತು ವೈ.ರಾಮಕೃಷ್ಣ ಹಾಗೂ ಕೆ.ಎಚ್.ಮುನಿಯಪ್ಪ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕಾಂಗ್ರೆಸ್ ಲೆಕ್ಕಾಚಾರ ಏನು?
• ಕ್ಷೇತ್ರದಲ್ಲಿ 3.60 ಲಕ್ಷ ಬಲಗೈ ಸಮುದಾಯದ ಮತದಾರರಿದ್ದಾರೆ. ಹೆಚ್ಚು ಮತದಾರರಿರುವ ಕಾರಣ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
• ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಸಮುದಾಯ ಬೆಂಬಲಿಸಿಕೊಂಡು ಬಂದಿದೆ.
• ಈವರೆಗೆ ಕಾಂಗ್ರೆಸ್‌ನಿಂದ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಹಾಗಾಗಿ ಈ ಬಾರಿ ಟಿಕೆಟ್ ನೀಡುವಂತೆ ಆಗ್ರಹ.
ಆಕಾಂಕ್ಷಿಗಳು ಯಾರ್ಯಾರು?
ಮುಖಂಡರಾದ ಸಿ.ಎಂ.ಮುನಿಯಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮುದ್ದುಗಂಗಾಧರ್, ಮುನಿರಾಜು ಇವರು ಬಲಗೈ ಸಮುದಾಯದಿಂದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ ಇನ್ನು ಹೊಸಬರು ಕ್ಷೇತ್ರಕ್ಕೆ ಆಕಾಂಕ್ಷಿಗಳಾಗುವ ಸಾಧ್ಯತೆ ಇದೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಏನು? ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯವನ್ನು ಕಾಯ್ದುಕೊಂಡು ಬರಲಾಗುತ್ತಿದೆ. ಇಲ್ಲಿ ಎಡಗೈ, ಬಲಗೈ, ಭೋವಿ ಅನ್ನುವುದಕ್ಕಿಂತ ಪರಿಶಿಷ್ಟ ಜಾತಿ ಎಂಬುದು ಮುಖ್ಯ. ರಾಷ್ಟ್ರೀಯ ಅಧ್ಯಕ್ಷರೇ ಎಡಗೈ ಜನಾಂಗದವರು. ಕಾಂಗ್ರೆಸ್‌ನಲ್ಲಿ ಹಿಂದಿನಿಂದಲೇ ಸಾಮಾಜಿಕ ನ್ಯಾಯ ಕಾಯ್ದುಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಈ ರೀತಿಯ ಕೂಗು ಎದ್ದಿರಬಹುದು. ಅದನ್ನು ನಾವು ಪರಿಗಣಿಸುತ್ತೇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂದು ಕೋಲಾರ ಜಿಲ್ಲಾಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್‌ನಿಂದ ಬಲಗೈ ಸಮುದಾಯಕ್ಕೆ ಕೋಲಾರ ಲೋಕಸಭಾ ಟಿಕೆಟ್ ನೀಡಬೇಕೆಂದು ಮೊದಲಿನಿಂದಲೂ ಒತ್ತಾಯಿಸುತ್ತಿದ್ದೇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಒಂದು ಬಾರಿ ನಮ್ಮ ಸಮುದಾಯಕ್ಕೂ ಅವಕಾಶ ಕಲ್ಪಿಸಿಕೊಡುವುದು ಒಳ್ಳೆಯದು, ಆಗ ತಾರತಮ್ಮ ಇಲ್ಲದಂತೆ ಆಗುತ್ತದೆ ಎಂದು ಕೋಡಿಕಣ್ಣೂರು ಗ್ರಾಮದ ದಲಿತ ಮುಖಂಡರಾದ ಹನುಮಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಕೂಗನ್ನು ನಿಲರ್ಕ್ಷಿಸಿದ ಕಾರಣ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಸಿದ್ದ ಬಲಗೈ ಸಮುದಾಯದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಆಯಿತು. ಆದ್ದರಿಂದ ಒಂದು ಬಾರಿ ಬಲಗೈ ಸಮುದಾಯದವರಿಗೂ ಅವಕಾಶ ನೀಡಿದರೆ, ಪರಿಶಿಷ್ಟ ಜಾತಿಯ ಒಗ್ಗಟ್ಟಿನ ಜತೆಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಪಕ್ಷದ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications