ಕೋಲಾರದಲ್ಲಿ ಪತ್ನಿಯ ಮೈಯನ್ನು ಕಚ್ಚಿ ಕೊಲೆ ಮಾಡಿದ ಪತಿ
ಕೋಲಾರ, ಆಗಸ್ಟ್ 28: ಕುಡಿದ ಮತ್ತಿನಲ್ಲಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕಚ್ಚಿ ಭೀಕರವಾಗಿ ಕೊಂದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
Recommended Video
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಐನೋರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಡಿತದ ಅಮಲಿನಲ್ಲಿದ್ದ ಮಂಜುನಾಥ, ತನ್ನ ಹೆಂಡತಿಯ ಮೈಯನ್ನು ಕಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. 28 ವರ್ಷದ ರತ್ನಮ್ಮ ಕೊಲೆಯಾದ ಮಹಿಳೆ.
ಆರೋಪಿ ಮಂಜುನಾಥ್ ರೈಲು ನಿಲ್ದಾಣ ಹಾಗೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದನು. ಆ ಭಿಕ್ಷೆಯ ಹಣದಲ್ಲೇ ಕುಡಿದುಕೊಂಡು ಮನೆಗೆ ಬರುತ್ತಿದ್ದನು. ನಾಲ್ಕೈದು ದಿನಗಳಿಂದ ಕುಡಿದು ಬಂದು ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದನು. ಆಕೆಯ ಮೈ, ಕೈ, ಕುತ್ತಿಗೆ, ಎದೆ ಭಾಗಕ್ಕೆ ಕಚ್ಚಿ ಹಿಂಸೆ ನೀಡಿದ್ದನು. ತಲೆಗೂ ಹೊಡೆದಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಗಾಯಗೊಂಡು ಬಿದ್ದಿದ್ದ ಹೆಂಡತಿಯನ್ನು ಮನೆಯೊಳಗೇ ಬಿಟ್ಟು, ಮಕ್ಕಳನ್ನ ಮನೆಯಿಂದ ಹೊರ ಹಾಕಿ ಪರಾರಿಯಾಗಿದ್ದನು.

ವಿಷಯ ತಿಳಿದ ರತ್ನಮ್ಮನ ಸಂಬಂಧಿಗಳು ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರತ್ನಮ್ಮ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.












Click it and Unblock the Notifications