ಕೋಲಾರ-ಚಿಕ್ಕಬಳ್ಳಾಪುರ ಪ್ರಾಕೃತಿಕ ವಿಪತ್ತಿಗೆ ಒಳಗಾಗಿವೆ ಎಂದು ಘೋಷಿಸಲು ಒತ್ತಾಯ
ಕೋಲಾರ ಅಕ್ಟೋಬರ್ 25: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಪ್ರಾಕೃತಿಕ ವಿಪತ್ತಿಗೆ ಒಳಗಾಗಿವೆ ಎಂದು ಘೋಷಿಸುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯ ಮಾಡಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯಿಸಿದೆ. ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಿಂದಾಗಿ ಕೆರೆಗಳಂತಾದ ಬರಪೀಡಿತ ಜಿಲ್ಲೆಗಳು ಅತಿವೃಷ್ಟಿಗೆ ತುತ್ತಾಗಿವೆ. ಹೀಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಪ್ರಾಕೃತಿಕ ವಿಪತ್ತಿಗೆ ಒಳಗಾಗಿವೆ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯ ಮಾಡಿದೆ.
ವೈಜ್ಞಾನಿಕ ನಿರ್ವಹಣೆಯ ಕೊರತೆಯಿಂದಾಗಿ ಹಲವಾರು ಕೆರೆಗಳ ಕಟ್ಟೆಗಳು ಒಡೆದುಹೋಗಿ ಅಪಾರ ಪ್ರಮಾಣದ ನೀರು ಆಂಧ್ರದ ಕಡೆಗೆ ಹರಿದುಹೋಗಿದೆ. ಇನ್ನೂ ನೂರಾರು ಕೆರೆಗಳ ನೀರಿನ ಮೂಲ ಶೇಖರಣಾ ಸಾಮರ್ಥ್ಯ ಕಳೆದುಕೊಂಡಿವೆ. ಈಗಲೂ ನೂರಾರು ಕೆರೆಗಳು ಸೋರುತ್ತಿದ್ದು ಅಪಾಯದಲ್ಲಿವೆ. ಕಾಲುವೆ, ರಾಜಕಾಲುವೆಗಳು ಒತ್ತುವರಿಯಾಗಿದ್ದು, ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿಯ ಮೇಲೆ ಪ್ರವಾಹದ ನೀರು ಹರಿದು ಅನೇಕ ರೈತರ ಬೆಳೆಗಳು ಹಾನಿಯಾಗಿವೆ. ನೂರಾರು ರೈತರ ಫಲವತ್ತಾದ ಮಣ್ಣು ಕೊಚ್ಚಿಹೋಗಿ ಸವಕಳಿಯಾಗಿ ರೈತರು ಕಂಗಾಲಾಗಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಹೇಳಿದೆ.

ಕೋಲಾರ
ಕೋಲಾರ ಜಿಲ್ಲೆಯಲ್ಲಿ 2021 ರ ಅಕ್ಟೋಬರ್ ತಿಂಗಳಲ್ಲಿ ದಿನಾಂಕ 1 ರಿಂದ 24 ರವರೆಗೆ ಆಗಬೇಕಾಗಿದ್ದ ವಾಡಿಕೆ 111 ಮಿಮಿ ಮಳೆ ಬದಲಿಗೆ 224 ಮಿಮಿ ಆಗಿದೆ. ಇದೇ ವರ್ಷದ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಆಗಬೇಕಾಗಿದ್ದ 399 ಮಿಮಿ ವಾಡಿಕೆ ಮಳೆ ಬದಲಿಗೆ 621 ಮಿಮಿ ಮಳೆಯಾಗಿದೆ. ಹಾಗೆಯೇ 2021 ರ ಜನವರಿ 1 ರಿಂದ ಇಂದಿನವರೆಗೆ ಆಗಬೇಕಾಗಿದ್ದ ಸರಾಸರಿ ವಾಡಿಕೆ ಮಳೆ 627 ಮಿಮಿ, ಆದರೆ ಆಗಿರುವುದು 1004 ಮಿಮಿ ಮಳೆಯಾಗಿದೆ. ಕೋಲಾರ ಜಿಲ್ಲೆಯ ಇಡೀ ವರ್ಷದ ವಾರ್ಷಿಕ ಸರಾಸರಿ ವಾಡಿಕೆ ಮಳೆಯ ಒಟ್ಟು ಪ್ರಮಾಣದ ಶೇ 36 ರಷ್ಟಿದೆ. ಆದರೆ ಈ ಮಳೆ ಇದೇ ಅಕ್ಟೋಬರ್ ತಿಂಗಳ ಕೇವಲ 24 ದಿನಗಳಲ್ಲಿ ಆಗಿದೆ.
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯ 2021 ರ ಅಕ್ಟೋಬರ್ ತಿಂಗಳ ದಿನಾಂಕ 1 ರಿಂದ 24 ವರೆಗೆ ಆಗಬೇಕಾಗಿದ್ದ ಸರಾಸರಿ ವಾಡಿಕೆ ಮಳೆ 118 ಮಿಮಿ ಇದೆ. ಆದರೆ ಆಗಿರುವುದು 296 ಮಿಮಿ ಮಳೆ. ಇನ್ನೂ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಆಗಬೇಕಾಗಿದ್ದ ಸರಾಸರಿ ವಾಡಿಕೆ ಮಳೆ 416 ಮಿಮಿ ಆಗಿದ್ದು ಆದರೆ ಆಗಿರುವುದು 496 ಮಿಮಿ ಮಳೆ. ಜೊತೆಗೆ 2021 ರ ಜನವರಿ 1 ರಿಂದ ಅಕ್ಟೋಬರ್ 24 ರ ವರೆಗೆ ವಾಡಿಕೆ 642 ಮಿಮಿ ಮಳೆ ಆಗಬೇಕಿತ್ತು ಆದರೆ ಆಗಿರುವುದು 962 ಮಿಮಿ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇಡೀ ವರ್ಷದ ವಾರ್ಷಿಕ ಸರಾಸರಿ ವಾಡಿಕೆ ಮಳೆಯ ಶೇಕಡಾ 42 ರಷ್ಟು ಪ್ರಮಾಣದ ಮಳೆ ಅಕಟ್ಓಬರ್ ತಿಂಗಳ ಕೇವಲ 24 ದಿನಗಳಲ್ಲಿ ಆಗಿದೆ.

ಈಗಾಗಲೇ ಕೊರೊನಾದಿಂದಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗಲೂ ಸಂಕಷ್ಟದಿಂದ ಪಾರಾಗಲು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ಭಾರೀ ಮಳೆಗೆ ನೀರು ಪಾಲಾಗಿದೆ. ಮಳೆ ಪರಿಣಾಮ ಅಪಾರ ಪ್ರಮಾಣದ ಭತ್ತ, ರಾಗಿ, ಟೊಮ್ಯಾಟೋ ಹೀಗೆ ಪ್ರಮುಖ ಬೆಳೆಗಳು ನೀರಿನಲ್ಲಿ ಮುಳುಗಿವೆ. ಇನ್ನೂ ನೀರಿಲ್ಲಿದ ಸಮಯದಲ್ಲಿ ಅಲ್ಪಸ್ವಲ್ಪ ನೀರಿನಲ್ಲೇ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಒಳ್ಳೆಯ ಬೆಳೆ ಬೆಳೆದು ಜೀವನ ಸುಧಾರಿಸಿತು ಎನ್ನುವ ಹೊತ್ತಿಗೆ ರೈತನಿಗೆ ಮಳೆ ಸುನಾಮಿಯಂತೆ ಅಪ್ಪಳಿಸಿದೆ. ಆದರೆ ಹಾನಿಗೊಳಗಾದ ಕೆಲ ಪ್ರದೇಶಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಇಲ್ಲದಿದ್ದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ಥಿತಿ ತಲುಪುವಂತಾಗುತ್ತದೆ.

Recommended Video
ಹಾಗಾಗಿ ಇದನ್ನು ಪ್ರಾಕೃತಿಕ ವಿಪತ್ತು ಎಂದು ಘೋಷಸಿ ನಷ್ಟಕ್ಕೊಳಗಾಗಿರುವ ರೈತರಿಗೆ ತುರ್ತು ಪರಿಹಾರ ಮತ್ತು ವೈಜ್ಞಾನಿಕವಾಗಿ ಕೆರೆಗಳ ಶಾಶ್ವತ ಪುನರುಜ್ಜೀವನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯಿಸಿದೆ.












Click it and Unblock the Notifications