ದಲಿತರು ಕಾಂಗ್ರೆಸ್‌ಗೆ ಮತ ಹಾಕಬೇಡಿ: ಯಡಿಯೂರಪ್ಪ
ಕೋಲಾರ, ಜನವರಿ 13: 'ಕಾಂಗ್ರೆಸ್‌ನವರು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಡದೆ ಅವರನ್ನು ಅವಮಾನಿಸಿದ್ದಾರೆ ಹಾಗಾಗಿ ದಲಿತರು ಕಾಂಗ್ರೆಸ್‌ಗೆ ಮತ ಹಾಕಬಾರದು.' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೋಲಾರ ಶ್ರೀನಿವಾಸಪುರದಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋಸ ಹೋಗಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಈ ರೀತಿಯ ತಪ್ಪು ಮಾಡಬೇಡಿ ಎಂದರು.
'ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಹೆಸರು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿದೆ ಎಂದ ಅವರು ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿದೆ ಎಂದರು.

ನಮ್ಮ ಸರ್ಕಾರ ಲೋಕಾರ್ಪಣೆ ಮಾಡುತ್ತದೆ
'ಕರಾವಳಿ ಭಾಗದ ಜನರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಗೆ ಒತ್ತು ನೀಡಿದ್ದೇವೆ. ರಾಜ್ಯದಲ್ಲಿ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲಿದ್ದು, ನಮ್ಮ ಸರ್ಕಾರವೇ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತದೆ' ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಧರ್ಮಗಳ ನಡುವೆ ಬೆಂಕಿ
'ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚಿದ್ದಾರೆ. ಅವರು ಸಿದ್ದರಾಮಯ್ಯ ಅಲ್ಲ, ಬೆಂಕಿ ರಾಮಯ್ಯ. ಸಿದ್ದರಾಮಯ್ಯ ಧರ್ಮದ ಬೆಂಕಿ ಇಟ್ಟು ಮನಸ್ಸುಗಳನ್ನು ಬೇರೆ ಬೇರೆ ಮಾಡುತ್ತಾರೆ. ಆದ್ದರಿಂದ ಅವರನ್ನು ಮನೆಗೆ ಕಳಿಸಿ' ಎಂದು ಕುಟುಕಿದರು.

ಯೋಜನೆಗೆ ತಡೆ
ಹೆಬ್ಬಾಳ ಕೆರೆಯ ವಿಷಪೂರಿತ ನೀರನ್ನು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಈ ಭಾಗದ ಜನಕ್ಕೆ ವಿಷಪೂರಿತ ನೀರುಣಿಸಲು ಪ್ರಯತ್ನಿಸುತ್ತಿದೆ, ನಾವು ಅಧಿಕಾರಕ್ಕೆ ಬಂದರೆ ಈ ಯೋಜನೆಗೆ ತಡೆ ನೀಡುವುದಾಗಿ ಅವರು ಹೇಳಿದರು.

ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿ
ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ ಮೂರು ಲಕ್ಷ ಕೋಟಿ ಹಣ ಕಾಂಗ್ರೆಸ್ ಮುಖಂಡರ ಮನೆ ಸೇರಿದೆ. ಆ ಹಣ ಏನಾಯ್ತು ಎಂದು ಜನ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಬೇಕು ಎಂದು ಯಡಿಯೂರಪ್ಪ ಪ್ರಶ್ನೆ ಮಾಡಿದರು.












Click it and Unblock the Notifications