ತೀವ್ರಕುತೂಹಲ ಮೂಡಿಸಿದ ಮುಳಬಾಗಿಲು ನಗರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ
ಕೋಲಾರ, ಅಕ್ಟೋಬರ್ 31: ವಿಧಾನಸಭೆ ಚುನಾವಣೆಗೆ ದಿಕ್ಸೂಜಿ ಎಂದೇ ಬಿಂಬಿತವಾಗಿದ್ದ ಮುಳಬಾಗಿಲು ನಗರಸಭೆ 2ನೇ ವಾರ್ಡ್ ಉಪಚುನಾವಣೆಯಲ್ಲಿ ಇತ್ತೀಚೆಗೆ ಹತ್ಯೆಯಾಗಿದ್ದ ಜಗಮೋಹನ್ ರೆಡ್ಡಿ ಪತ್ನಿ ನಿರುಪಮಾ ಜಯಬೇರಿ ಬಾರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ನಿರುಪಮಾ 14 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಎಂಆರ್ ಮುರಳಿ ವಿರುದ್ಧ ಜಯ ಸಾಧಿಸಿದ್ದಾರೆ. ನಿರುಪಮಾ 510 ಮತಗಳನ್ನು ಪಡೆದರೆ, ಜೆಡಿಎಸ್‌ನ ಮುರಳಿ 496 ಮತಗಳನ್ನು ಪಡೆದಿದೆ. ಜಗಮೋಹನ್ ರೆಡ್ಡಿ ಹತ್ಯೆಯಾದ ಹಿನ್ನಲೆಯಲ್ಲಿ ಉಪಚುನಾವಣೆ ನಡೆದಿತ್ತು. ಇದೀಗ ವಾರ್ಡ್‌ನ ಮತದಾರರು ನಿರುಪಮಾಗೆ ಬೆಂಬಲ ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಾಯಕರ ಪ್ರತಿಷ್ಠೆಯ ಕಣವಾಗಿದ್ದ ಉಪಚುನಾವಣೆ
ಈ ಉಪಚುನಾವಣೆಯಿಂದ ಬಿಜೆಪಿ ಹಿಂದೆ ಸರಿದಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈ ಪೈಪೋಟಿಯನ್ನು ಮುಂದಿನ ಚುನಾವಣೆಯ ದಿಕ್ಸೂಜಿ ಎಂದೇ ಹೇಳಲಾಗುತ್ತಿತ್ತು. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಚುನಾವಣೆಯ ಮಹತ್ವ ಹೆಚ್ಚುವಂತೆ ಮಾಡಿದೆ.

ಈ ಇಬ್ಬರು ನಾಯಕರು ಹಾಗೂ ಪಕ್ಷಗಳು ಚುನಾವಣೆಗೆ ತಮ್ಮದೇ ಆದಂತಹ ಕಾರ್ಯತಂತ್ರ ರೂಪಿಸಿದ್ದರು. ಮತದಾರರನ್ನು ಸೆಳೆಯಲು ಹಲವಾರು ಕಸರತ್ತುಗಳನ್ನು ನಡೆಸಿದ್ದರು. ಜೊತೆಗೆ ಕೋಟ್ಯಂತರ ಹಣವನ್ನು ಚೆಲ್ಲಲಾಗಿದೆ ಎಂಬ ಸುದ್ದಿಯೂ ಕೇಳಿಬಂದಿತ್ತು.
ನಿರುಪಮಾ ಪರ ಕೊತ್ತೂರು ಮಂಜುನಾಥ್ ಹಾಗೂ ಮುರಳಿ ಪರ ಸಮೃದ್ಧಿ ಮಂಜುನಾಥ್ ಬೆನ್ನಲುಬಾಗಿ ನಿಂತಿದ್ದರು. ವಾರ್ಡ್ ಉಪಚುನಾವಣೆ ಅಭ್ಯರ್ಥಿಗಳ ಜೊತೆಗೆ ಈ ಇಬ್ಬರು ನಾಯಕರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕೊನೆಗೆ ಕಾಂಗ್ರೆಸ್ ಪಕ್ಷ ಜಯಬೇರಿ ಬಾರಿಸಿದೆ.












Click it and Unblock the Notifications