ಕಾರವಾರ: ಮತ ಎಣಿಕೆ ಕೇಂದ್ರದಲ್ಲಿ ವಿವಿಧ ಸೌಲಭ್ಯ
ಕಾರವಾರ, ಮೇ 14 : ಶನಿವಾರವಷ್ಟೆ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಎಲ್ಲರ ಚಿತ್ತ ಜಿಲ್ಲೆಯ ಮತ ಎಣಿಕೆ ಕೇಂದ್ರ ಕುಮಟಾ ತಾಲೂಕಿನ ಹೆಗಡೆ ರಸ್ತೆಯಲ್ಲಿರುವ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದತ್ತ ನೆಟ್ಟಿದೆ.
ಮತ ಎಣಿಕೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಬರುವ ವಾಹನಗಳ ಸುಗಮ ಸಂಚಾರ ಹಾಗೂ ನಿಲುಗಡೆಗಾಗಿ ಕೇಂದ್ರದತ್ತ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ವೀಕ್ಷಕರು ಮುಂತಾದ ಹಿರಿಯ ಅಧಿಕಾರಿಗಳ ಕಾರುಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.
ಕಾಲೇಜಿನ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿ ನಾಲ್ಕೂ ದಿಕ್ಕಿಗೆ ಪೊಲೀಸ್ ಕಾವಲನ್ನು ಹಾಕಲಾಗುತ್ತಿದೆ. ಕಾವಲಿನಲ್ಲಿರುವ ಪೊಲೀಸರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ಟೆಂಟ್ ನಿರ್ಮಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿ ಈ ಮತ ಎಣಿಕೆ ಕೇಂದ್ರ ಇರುವುದರಿಂದ ಅಲ್ಲಿಗೆ ಹೋಗಲು ಸಹಕಾರಿಯಾಗುವಂತೆ ನಾಮಫಲಕಗಳನ್ನು ಅಳವಡಿಸಲಾಗಿದೆ. ಯಾವ ಕ್ಷೇತ್ರಗಳ ಮತ ಎಣಿಕೆ ಎಲ್ಲಿ ಎನ್ನುವ ವಿವರವಾದ ಮಾಹಿತಿ ಫಲಕಗಳನ್ನೂ ಕೇಂದ್ರದಲ್ಲಿ ಅಳವಡಿಸಲಾಗಿದೆ.

ಪಾಸ್ ಪಡೆದು ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಕುಳಿತುಕೊಳ್ಳಲು, ಚಹಾ, ತಿಂಡಿ ವಿತರಿಸಲು ಅನುಕೂಲವಾಗುವಂತೆ ಕಟ್ಟಡದ ನಡುವಿನ ಮೈದಾನದಲ್ಲಿ ಶಾಮಿಯಾನ ಹಾಕಲಾಗಿದೆ. ಎದುರು ಗಡೆಯಿಂದ ಹಿರಿಯ ಅಧಿಕಾರಿಗಳು, ಚುನಾವಣಾ ಸಿಬ್ಬಂದಿಗೆ ಮಾತ್ರ ಪ್ರವೇಶ ಅವಕಾಶವಿದ್ದರೆ, ಹಿಂಬದಿ ದ್ವಾರದಲ್ಲಿ ಉಳಿದವರಿಗೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications