ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದರೂ ಬಸ್ ಇಲ್ಲದ ಊರಿದು: ಬೇಸತ್ತು ಶಾಲೆ ಬಿಡುತ್ತಿದ್ದಾರೆ ವಿದ್ಯಾರ್ಥಿಗಳು
ಕಾರವಾರ, ಡಿಸೆಂಬರ್ 26: ದೇಶವೇ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದರೂ ಕೂಡ ಅದೇಷ್ಟೋ ಗ್ರಾಮೀಣ ಭಾಗಗಳು ಇಂದಿಗೂ ಕನಿಷ್ಠ ಮೂಭೂತ ಸೌಲಭ್ಯ ಪಡೆಯಲಾಗದ ಸ್ಥಿತಿಯಲ್ಲಿವೆ. ಇದೇ ರೀತಿ ಇಲ್ಲೊಂದು ಗ್ರಾಮದ ಪಕ್ಕವೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರು ಕೂಡ ಗ್ರಾಮದ ಮಕ್ಕಳು ಮಾತ್ರ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಜನೆಗೆ ನಿತ್ಯವೂ ಕಾಲ್ನಡಿಗೆಯಲ್ಲಿ ಸಾಗಿ ಅಕ್ಷರಭ್ಯಾಸ ಮಾಡಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲೂಕಿನ ಜಲಕಟ್ಟಿ ಗ್ರಾಮದ ವಿದ್ಯಾರ್ಥಿಗಳು ಇಂತಹದೊಂದು ದುಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿದೆ. ಜಲಕಟ್ಟಿಯಲ್ಲಿ ಕೇವಲ 1 ರಿಂದ 5ನೇ ತರಗತಿಯ ಕಿರಿಯ ಪ್ರಾಥಮಿಕ ಹಂತದ ಶಾಲೆಯಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಿಲ್ಲ. ಹಾಗಾಗಿ 6ನೇ ತರಗತಿಯಿಂದ ಎಸ್.ಎಸ್.ಎಲ್.ಸಿ. ವರೆಗಿನ ಶಿಕ್ಷಣ ಪಡೆಯಲು ಜಲಕಟ್ಟಿ ವಿದ್ಯಾರ್ಥಿಗಳು ಅನಮೋಡ ಗ್ರಾಮಕ್ಕೇ ಬರಬೇಕು. ಜಲಕಟ್ಟಿಯಿಂದ ಅನಮೋಡ 4ಕಿ.ಮೀ ದೂರ ಇರುವುದರಿಂದ ಪ್ರತಿನಿತ್ಯ 8 ಕಿ.ಮೀ ನಡೆಯಬೇಕಾಗುತ್ತದೆ.

ಸದ್ಯ ಗ್ರಾಮದಿಂದ ಸುಮಾರು 15 ಕ್ಕೂ ಹೆಚ್ಚು ಮಕ್ಕಳು ಪ್ರೌಢಶಾಲೆಗೆ ಹಾಗೂ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಗೆ ತೆರಳುತ್ತಾರೆ. ಆದರೆ ಮಕ್ಕಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲ, ಚಳಿಗಾಲ ಇಲ್ಲವೇ ಬೇಸಿಗೆಯೂ ಪ್ರತಿನಿತ್ಯ ಗ್ರಾಮದಿಂದ ಕಾಲ್ನಡಿಗೆಯಲ್ಲಿ ತೆರಳಿ ಅಕ್ಷರಭ್ಯಾಸ ಮಾಡಬೇಕಾದ ಸ್ಥಿತಿ ಇದೆ.
ಗ್ರಾಮದ ಪಕ್ಕದಲ್ಲಿಯೇ ಗೋವಾ ಬೆಳಗಾವಿ ಸಂಪರ್ಕ ಮಾಡುವ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಪ್ರತಿನಿತ್ಯ ಹಲವು ಬಸ್‌ಗಳು ಸಂಚಾರ ಮಾಡುತ್ತವೆ. ಆದರೆ ಕಣ್ಣೇದುರಿಗೆ ಬಸ್‌ಗಳು ಹಾದು ಹೋಗುತ್ತಿದ್ದರು ಮಕ್ಕಳು ಕೇವಲ ಅವುಗಳನ್ನು ನೋಡಲು ಸಾಧ್ಯವಿದಯೇ ವಿನಃ ಕೈ ಮಾಡಿದ್ದಲ್ಲಿ ಯಾರು ಕೂಡ ನಿಲ್ಲಿಸುವುದಿಲ್ಲ. ಇದರಿಂದ ಮಕ್ಕಳಿಗೆ ಕಾಲ್ನಡಿಗೆಯೇ ಅನಿವಾರ್ಯವಾಗಿದೆ.

ಸುರಕ್ಷತೆ ಇಲ್ಲದೆ ಪ್ರಯಾಣಿಸುವ ಅನಿವಾರ್ಯ
ಇನ್ನು ಸ್ಥಳೀಯವಾಗಿ ಸಂಚಾರ ಮಾಡುವ ರಾಮನಗರ- ಅನಮೋಡ್, ಜೋಯಿಡಾ ಬಸ್‌ಗಳು ಕೂಡ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದರೂ ಕೂಡ ಒಂದು ಕೂಡ ಶಾಲಾ ಸಮಯಕ್ಕೆ ಓಡಾಟ ನಡೆಸುವುದಿಲ್ಲ. ಇದರಿಂದ ಮಕ್ಕಳು ಕಂಡ ಕಂಡ ಕಾರು, ಲಾರಿ, ಬೈಕಗಳಿಗೆ ಕೈ ಮಾಡಿ ತೆರಳುತ್ತಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳು ಕೂಡ ಈ ರೀತಿ ವಾಹನ ಹತ್ತುವುದರಿಂದ ಸುರಕ್ಷತೆಯೇ ಇಲ್ಲದೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.
ಜಲಕಟ್ಟಿ ಗ್ರಾಮದಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಹೆದ್ದಾರಿಯಲ್ಲಿ ಬೆಳಗಾವಿ, ಗೋವಾ, ಹುಬ್ಬಳ್ಳಿ ಬಸ್‌ಗಳ ಸಂಚಾರ ಇದ್ದರೂ ಕೂಡ ಅವುಗಳನ್ನು ಯಾವುದು ಕೂಡ ಕೈ ಮಾಡಿದರೂ ನಿಲ್ಲಿಸುವುದಿಲ್ಲ. ಸ್ಥಳೀಯ ಬಸ್‌ಗಳು ಕೂಡ ಶಾಲಾ ಮಕ್ಕಳ ಸಮಯಕ್ಕೆ ಇಲ್ಲ. ಇದರಿಂದ ಮಕ್ಕಳು ನಡೆದುಕೊಂಡೆ ತೆರಳಬೇಕಾಗಿದೆ.
ಇನ್ನು ಕೆಲ ವೇಳೆ ಮಕ್ಕಳು ಖಾಸಗಿ ವಾಹನಗಳಿಗೆ ಕೈ ಮಾಡಿ ತೆರಳುತ್ತಾರೆ. ಇನ್ನು ಕೆಲವರು ನಡೆದುಕೊಂಡೆ ತೆರಳುತ್ತಾರೆ. ಬಸ್ ಸೌಕರ್ಯಕ್ಕಾಗಿ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಮನಗರದಿಂದ ಅನಮೋಡಿಗೆ ಶಾಲಾ ಸಮಯಕ್ಕೆ ಬಸ್ ಬಿಟ್ಟಲ್ಲಿ ಮಕ್ಕಳ ಜೊತೆ ಕೂಲಿ ಕೆಲಸಕ್ಕೆ ತೆರಳುವವರಿಗೂ ಅನುಕೂಲವಾಗುತ್ತದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರಾದ ಸ್ಥಳೀಯರಾದ ವಿಠಲ್ ನಾನು ಗೌಳಿ ಆಗ್ರಹಿಸಿದ್ದಾರೆ.
ಜಲಕಟ್ಟಿಯಿಂದ ಸುಮಾರು 15 ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಹಿರಿಯ ಪ್ರಾಥಮಿಕ ಶಾಲೆಗೂ ಅನಮೋಡ್‌ಗೆ ಬರುತ್ತಾರೆ. ಹೆಣ್ಣು ಮಕ್ಕಳಿಗೆ ಹಾಸ್ಟಲ್ ವ್ಯವಸ್ಥೆ ಇದೆ. ಆದರೆ ಕೆಲವರು ಮನೆಯಿಂದಲೇ ಬರುತ್ತಾರೆ. ಬಸ್ ಸೌಕರ್ಯ ಇಲ್ಲದ ಕಾರಣ ಖಾಸಗಿ ವಾಹನ ಏರಿ ಬರುವುದು ಗಮನಕ್ಕೆ ಬಂದಾಗ ಗುರುತು ಪರಿಚಯ ಇಲ್ಲದ ವಾಹನ ಹತ್ತದಂತೆ ಮಕ್ಕಳಿಗೆ ತಿಳಿಸಿದ್ದೇವೆ. ಆದರೆ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಕೆಲವರು ಅನಿವಾರ್ಯವಾಗಿ ಕೈ ಮಾಡಿ ಹತ್ತಿ ಬರುತ್ತಾರೆ. ಬಸ್ ವ್ಯವಸ್ಥೆ ಕಲ್ಪಿಸಿದ್ದಲ್ಲಿ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಪಕಾರದ ಆರ್.ಪಿ ಗೌಡ.
ಗೋವಾಕ್ಕೆ ಹೊರಟ ಸಂದರ್ಭದಲ್ಲಿ ನಿತ್ಯವೂ ವಿದ್ಯಾರ್ಥಿಗಳ ಸಮಸ್ಯೆ ಕಣ್ಣಾರೆ ಕಂಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ತಕ್ಷಣವೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಆದೇಶ ನೀಡಿ ಗ್ರಾಮಕ್ಕೆ ಮುಂಜಾನೆ ಮತ್ತು ಸಂಜೆ ಬಸ್ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳ ನಿತ್ಯದ ಪಾದಯಾತ್ರೆ ಗೋಳು ನಿವಾರಿಸಬೇಕು ಎಂದು ಪ್ರಯಾಣಿಕರಾದ ಗುರುಮೂರ್ತಿ ವೀ. ಯರಗಂಬಳಿಮಠ ಹೇಳಿದ್ದಾರೆ.
ಶಾಲೆ ಬಿಡುತ್ತಿರುವ ಹೆಣ್ಣು ಮಕ್ಕಳು
ಜಲಕಟ್ಟಿ ಗ್ರಾಮದಿಂದ ಅನಮೋಡಿಗೆ 11 ಗಂಟೆಗೆ ಬಸ್ ಇದೆ. ಆದರೆ ಈ ಬಸ್ ಏರಿ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳು ಆಗದ ಕಾರಣ ಮಕ್ಕಳು ಶಾಲೆಗೆ ತೆರಳಲು ಖಾಸಗಿ ವಾಹನಗಳಿಗೆ ಕೈ ಮಾಡಿ ತೆರಳುತ್ತಾರೆ. ಅದರಲ್ಲಿಯೂ ಹೆಣ್ಣು ಮಕ್ಕಳು ಕೂಡ ಈ ರೀತಿ ವಾಹನ ಏರಿ ತೆರಳುತ್ತಾರೆ. ಆದರೆ ಹೀಗೆ ಕಳೆದ ಕೆಲ ವರ್ಷದ ಹಿಂದೆ ಹೆಣ್ಣುಮಕ್ಕಳು ತೆರಳುವಾಗ ವಾಹನದಲ್ಲಿ ಅಸಭ್ಯವಾಗಿ ವರ್ತಿಸಿದ್ದರಿಂದ ಗಲಾಟೆಯಾಗಿತ್ತು. ಇದರಿಂದ ಇದೀಗ ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications