ರಜೆಯ ಮೇಲೆ ಮನೆಗೆ ಬರುತ್ತಿದ್ದ ಕಾರವಾರ ಮೂಲದ ಯೋಧ ಅನುಮಾನಾಸ್ಪದ ಸಾವು!
ಕಾರವಾರ, ಡಿಸೆಂಬರ್ 05: ರಜೆಯ ಮೇಲೆ ಮನೆಗೆ ಬರುತ್ತಿದ್ದ ಕಾರವಾರ ಮೂಲದ ಯೋಧನೋರ್ವ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಮಥುರಾದಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಕಡವಾಡ ಮೂಲದ ಮೇಲಿನ ಮಖೇರಿಯ 35 ವರ್ಷದ ಯೋಧ ದುಮ್ಮಿಂಗ್ ಸಿದ್ದಿ ಮೃತಪಟ್ಟವರು. ಬಿಎಸ್ಎಫ್ ನಲ್ಲಿ ಕಳೆದ 15 ವರ್ಷಗಳಿಂದ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ಎರಡು ವರ್ಷದಿಂದ ಪಂಜಾಬಿನ ಪಠಾಣ್ ಕೋಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕ್ರಿಸ್ ಮಸ್ ಸಂಬಂಧ ಆರು ತಿಂಗಳ ಬಳಿಕ ರಜೆ ಮೇಲೆ ಸೋಮವಾರ ಮನೆಗೆ ಬರುವುದಾಗಿ ಕುಟುಂಬದವರಿಗೆ ದುಮ್ಮಿಂಗ್ ತಿಳಿಸಿದ್ದರು. ಆದರೆ, ದೆಹಲಿಯಿಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ಸೈನಿಕ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಮಥುರಾದ ಸೈನಿಕ್ ಆಸ್ಪತ್ರೆಯಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಬುಧವಾರ ಕಾರವಾರಕ್ಕೆ ಮೃತದೇಹ ತರುವ ನೀರೀಕ್ಷೆ ಇದೆ.
ದುಮ್ಮಿಂಗ್ ಮನೆ ಕಟ್ಟಿಸಲು ಹಣ ಕಳಿಸುತ್ತಿದ್ದ. ಈಗಾಗಲೇ ಮನೆ ನಿರ್ಮಾಣ ಪೂರ್ಣಗೊಂಡಿದ್ದು, ತಿಂಗಳಲ್ಲಿ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇತ್ತು. ಜೊತೆಗೆ, ದುಮ್ಮಿಂಗ್ ನ ಮಗನ ಜನ್ಮ ದಿನಾಚರಣೆ ಇದೇ 6ರಂದು ಇತ್ತು. ಆತ ಮನೆಗೆ ಬರ್ತಾನೆಂದು ಕಾಯುತ್ತಿದ್ದೇವೆ. ಆತನ ಮೊಬೈಲ್ ಗೆ ಕರೆ ಮಾಡುತ್ತಿದ್ದೇವೆ. ಆತನ ಸ್ನೇಹಿತರು ಕರೆ ಸ್ವೀಕರಿಸಿ ಮಾತನಾಡುತ್ತಿದ್ದು, ಆತಂಕ ಉಂಟಾಗಿದೆ ಎಂದು ದುಮ್ಮಿಂಗ್ ಸಿದ್ದಿಯ ತಂದೆ ಮೋತೇಶ್ ಹೇಳುತ್ತಾರೆ.
ಮಗನ ಸಾವನ್ನು ಪಾಲಕರು ನಂಬಲು ಸಿದ್ಧರಿಲ್ಲ. "ಆತನಿಗೆ ಏನೂ ಆಗಿಲ್ಲ. ಮನೆಗೆ ಮಗ ಸೇಫ್ ಆಗಿ ಬರಲಿ" ಎಂದು ಕಾಯುತ್ತಿದ್ದಾರೆ. ಮೃತ ಯೋಧನ ಮನೆಯಲ್ಲೀಗ ನೀರವ ಮೌನ ಆವರಿಸಿದೆ.












Click it and Unblock the Notifications