ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ?; ಸಿದ್ದರಾಮಯ್ಯ ವ್ಯಂಗ್ಯ
ಕಾರವಾರ, ನವೆಂಬರ್ 4: 'ಬಿಜೆಪಿ ಪಕ್ಷದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಹಳ ಜನ ಶತ್ರುಗಳಿದ್ದಾರೆ. ಅವರಲ್ಲೇ ಯಾರೋ ಆಡಿಯೋ ರೆಕಾರ್ಡ್ ಮಾಡಿ, ಬಿಡುಗಡೆ ಮಾಡಿದ್ದಾರೆ. ಇದ್ದ ಮೂರ್ ಜನರಲ್ಲಿ ಕದ್ದವರ್ಯಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ?' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
'ಮೊದಲು ಆಡಿಯೋದಲ್ಲಿನ ಹೇಳಿಕೆ ತಮ್ಮದೇ ಎಂದು ಒಪ್ಪಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ, ಅಮಿತ್ ಷಾ ತರಾಟೆಗೆ ತೆಗೆದುಕೊಂಡ ಮೇಲೆ ವರಸೆ ಬದಲಿಸಿದ್ದಾರೆ. ಇದರಿಂದಾಗಿಯೇ ಅಮಿತ್ ಷಾ ನಿರ್ದೇಶನದಂತೆಯೇ ಸರ್ಕಾರವನ್ನು ಬೀಳಿಸಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಸತ್ಯ ಎಂದು ಸಾಬೀತಾಗಿದೆ' ಎಂದು ಹೇಳಿದ್ದಾರೆ.

'ಶ್ರೀಮಂತ ಪಾಟೀಲ್ ಹೃದಯದ ಕಾಯಿಲೆ ಎಂದು ಸುಳ್ಳು ಹೇಳಿ 300 ಕಿ.ಮೀ ದೂರದ ಚೆನ್ನೈಗೆ ಹೋಗಿದ್ದರು. ಕೊನೆಗೆ ಅಲ್ಲಿಂದ ಹೃದ್ರೋಗ ತಜ್ಞರೇ ಇಲ್ಲದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ?' ಎಂದು ಟ್ವಿಟರ್ ನಲ್ಲಿ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.












Click it and Unblock the Notifications