'ಭಟ್ಕಳ ಬ್ರದರ್ಸ್’ ಜನ್ಮ ರಹಸ್ಯ ಜಾಲಾಡಿದ ಎಟಿಎಸ್ ಅಧಿಕಾರಿಗಳು!
ಕಾರವಾರ, ಜುಲೈ 09; 2010ರ ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಭಟ್ಕಳ ಪಟ್ಟಣಕ್ಕೆ ಭೇಟಿ ನೀಡಿ, ಕೆಲವು ಸರ್ಕಾರಿ ಇಲಾಖೆಗಳಿಗೆ ತೆರಳಿ ಕೆಲವು ಮಾಹಿತಿ ಸಂಗ್ರಹಿಸಿದ್ದಾರೆ.
ಪುಣೆಯಿಂದ ಬಂದಿದ್ದ ಇಬ್ಬರು ಅಧಿಕಾರಿಗಳು ಹಾಗೂ ಮೂವರು ಸಿಬ್ಬಂದಿಯನ್ನೊಳಗೊಂಡ ಈ ತಂಡ ಮೊದಲು ಕಾರವಾರಕ್ಕೆ ಭೇಟಿ ನೀಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿ, ಅವರಿಂದ ತನಿಖೆಗೆ ಒಪ್ಪಿಗೆ ಪಡೆದು ಪಟ್ಟಣಕ್ಕೆ ತೆರಳಿತ್ತು. ಪಟ್ಟಣದಲ್ಲಿ ಕಂದಾಯ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಸರಕಾರಿ ಕಛೇರಿಗಳಿಗೆ ತೆರಳಿ ಕೆಲವು ಮಾಹಿತಿಗಳನ್ನು ಸಂಗ್ರಹಣೆ ಮಾಡಿದ್ದಾರೆ.
ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಿಯಾಜ್ ಭಟ್ಕಳ ಹಾಗೂ ಇಕ್ಬಾಲ್ ಭಟ್ಕಳನ ಜನ್ಮ ದಾಖಲೆಗೆ ಸಂಬಂಧಪಟ್ಟಂತೆ ಇದ್ದ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಇಲ್ಲಿಗೆ ಭೇಟಿ ನೀಡಿದ್ದರು. ಈ ಇಬ್ಬರ ಕೆಲ ಸಂಬಂಧಿಕರ ಮನೆಗಳಿಗೂ ಕೂಡ ಅಧಿಕಾರಿಗಳು ಭೇಟಿ ನೀಡಿ ಕೆಲವು ಮಾಹಿತಿಗಳನ್ನು ಪಡೆದಿದ್ದಾರೆ.

ಈ ಇಬ್ಬರು ಸಹೋದರರು ಮುಂಬೈನಲ್ಲಿ ಹುಟ್ಟಿ ಬೆಳೆದರೂ ಅವರ ಕುಟುಂಬದ ಮೂಲ ಭಟ್ಕಳವಾಗಿದೆ. ಇವರ ಸಂಬಂಧಿಕರು ಕೆಲವರು ಇಲ್ಲೇ ನೆಲೆಸಿದ್ದು, ಈ ಸಂಬಂಧ ರಿಯಾಜ್, ಇಕ್ಬಾಲ್ ಕೂಡ ಈ ಹಿಂದೆ ಕೆಲಕಾಲ ಪಟ್ಟಣಕ್ಕೆ ಬಂದು ನೆಲೆಸಿದ್ದರು. ಇವರಿಬ್ಬರು ಪಾಸ್‌ಪೋರ್ಟ್ ಅನ್ನು ಬೆಂಗಳೂರಿನಲ್ಲಿ ಪಡೆದಿದ್ದು, ಒಂದು ರಾಜ್ಯದಲ್ಲಿ ಹುಟ್ಟಿ ಇನ್ನೊಂದು ರಾಜ್ಯದ ರಾಜಧಾನಿಯಲ್ಲಿ ಪಾಸ್‌ಪೋರ್ಟ್ ಅನ್ನು ಯಾವ ದಾಖಲೆಗಳನ್ನು ಸಲ್ಲಿಸಿ ಪಡೆದಿದ್ದರು ಎಂಬಿತ್ಯಾದಿಗಳ ಗೊಂದಲಗಳ ನಿವಾರಣೆಗಾಗಿ ಭಟ್ಕಳ ಪಟ್ಟಣಕ್ಕೆ ಬಂದಿದ್ದರು.
ಪುರಸಭೆ, ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಆಹಾರ ನಿರೀಕ್ಷಕರ ಕಚೇರಿ, ಮಿನಿ ವಿಧಾನಸೌದದಲ್ಲಿರುವ ಚುನಾವಣಾ ವಿಭಾಗದ ಕಚೇರಿ, ಡಿವೈಎಸ್‌ಪಿ ಕಚೇರಿಗಳಿಗೆ ತೆರಳಿ, ಸಹೋದರರಿಬ್ಬರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಕೆಲವು ಅವಶ್ಯಕ ದಾಖಲೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಗುರುವಾರ ಪುಣೆಗೆ ವಾಪಸ್ಸಾಗಿದೆ.
ಭಟ್ಕಳ ಬದ್ರರ್ಸ್; 1993ರವರೆಗೆ ಭಟ್ಕಳದಲ್ಲಿ ವಾಸಿಸುತ್ತಿದ್ದ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ಸಹೋದರರ ಕುಟುಂಬ, ಕೆಲವು ಗಲಭೆಗಳ ನಂತರ ಪುಣೆಗೆ ತೆರಳಿ ವಾಸ್ತವ್ಯ ಹೂಡಿತ್ತು. ಈ ಸಹೋದರರಿಬ್ಬರೂ ಪುಣೆಯಲ್ಲಿ ವಿದ್ಯಾವಂತ ಯುವಕರನ್ನು ಒಗ್ಗೂಡಿಸಿ ಮಾತೃ ಭೂಮಿಯ ವಿರುದ್ಧವೇ ಎತ್ತಿಕಟ್ಟಲಾರಂಭಿಸಿದ್ದರು.
ಸಂಬಂಧಿ ಯಾಸೀನ್ ಭಟ್ಕಳನ ಜೊತೆಗೂಡಿ ಸ್ಥಾಪಿಸಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಮೂಲಕ ಈ ಸಹೋದರರು ಜರ್ಮನ್ ಬೇಕರಿ (2010), ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ (2010) ಮುಂಭಾಗದ ಸ್ಫೋಟ, ಜಾಮಿಯಾ ಮಸೀದಿ (2010), ಶೀತಲ್‌ಘಾಟ್ (2010) ಮತ್ತು ಮುಂಬಯಿ (2011), ಜೈಪುರ ಸರಣಿ ಸ್ಫೋಟ (2008), ದೆಹಲಿ ಸರಣಿ ಸ್ಫೋಟ (2008), ಅಹ್ಮದಾಬಾದ್ ಮತ್ತು ಸೂರತ್ ಸರಣಿ ಸ್ಫೋಟ (2008)ಗಳನ್ನು ನಡೆಸಿದ್ದರು. ಈ ಅವಧಿಯನ್ನು ಆಧುನಿಕ ಭಾರತದ ರಕ್ತಸಿಕ್ತ ಇತಿಹಾಸವೆಂದೇ ಹೇಳಲಾಗುತ್ತದೆ.
ಭಾರತೀಯ ತನಿಖಾ ಸಂಸ್ಥೆಗಳಿಗೆ 2008ರ ದೆಹಲಿ ಸರಣಿ ಸ್ಪೋಟದಲ್ಲಿ ಈ ಸಹೋದರರ ಕೈವಾಡ ಇರುವ ಬಗ್ಗೆ ಮಾಹಿತಿ ದೊರೆತಿತ್ತು. ಅಂದಿನಿಂದ ಇವರು 'ಭಟ್ಕಳ್ ಬ್ರದರ್ಸ್' ಅಂತಲೇ ಎಲ್ಲೆಡೆ ಕುಖ್ಯಾತಿ ಗಳಿಸಿದರು. ಮುಂಬೈ ಸ್ಫೋಟದ ಕುರಿತು ಅಲ್ಲಿನ ಎಟಿಎಸ್ ತನಿಖೆ ಮುಂದುವರಿಸಿದೆ. ಇಬ್ಬರೂ ಪ್ರಸ್ತುತ ಪಾಕಿಸ್ತಾನದಲ್ಲೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಪಾಕ್ ಕೂಡ ಈ ಇಬ್ಬರಿಗೂ ರಾಜಾಶ್ರಯ ನೀಡಿದೆ ಎಂಬ ಆರೋಪವೂ ಇದೆ.












Click it and Unblock the Notifications