ಕಾರವಾರದ ದಿಂಡಿ ಉತ್ಸವದಲ್ಲಿ ಗಮನ ಸೆಳೆದ 'ಕಾಂತಾರ'ದ ಪಂಜುರ್ಲಿ ದೈವ
ಕಾರವಾರ, ನವೆಂಬರ್ 29: ಬ್ರಿಟಿಷರ ಕ್ರೌರ್ಯದ ವಿರುದ್ಧ ಜಾತ್ರೆ ಸಂದರ್ಭದಲ್ಲಿ ಈ ಹಿಂದೆ ವಿಡಂಬನಾತ್ಮಕವಾಗಿ ಪ್ರದರ್ಶಿಸುತ್ತಿದ್ದ ಹಾಲಕ್ಕಿ ಸಮುದಾಯದವರ ಅಣಕು ಪ್ರದರ್ಶನ ಈಗಲೂ ಮುಂದುವರಿದಿದೆ.
ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ಆಚರಿಸುವ ಜಾತ್ರಾ ಮಹೋತ್ಸವವನ್ನು ದಿಂಡಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಬ್ರಿಟಿಷರ ಕಾಲದಿಂದಲೂ ಹಾಲಕ್ಕಿ ಸಮುದಾಯದವರು ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದು ಈ ಬಾರಿಯೂ ಜಾತ್ರೆಯಲ್ಲಿ ವಿಭಿನ್ನ ಅಣಕು ಪ್ರದರ್ಶನಗಳು ಎಲ್ಲರ ಗಮನ ಸೆಳೆದಿದೆ.
ಕಾರವಾರ ತೀರದಲ್ಲಿ ಡಾಲ್ಫಿನ್ಗಳ ಚೆಲ್ಲಾಟ: ಯೋಜನೆ ಜಾರಿಗೆ ಒತ್ತಾಯ
ಅಮದಳ್ಳಿಯ ಜಾತ್ರಾ ಮಹೋತ್ಸವದಲ್ಲಿ ಬೃಹತ್ ಗಾತ್ರದ ಪಂಜುರ್ಲಿ, ತೋಳ, ಕೋಣ ಸೇರಿದಂತೆ ಹತ್ತಾರು ಬಗೆಯ ಮಾದರಿಗಳನ್ನು ಪ್ರದರ್ಶಿಸಲಾಯಿತು. ಬೃಹತ್ ಗಾತ್ರದ ಈ ಪ್ರಾಣಿಗಳ ಮಾದರಿಯನ್ನು ಹೊತ್ತುಕೊಂಡು ಕಾಡುಜನರ ವೇಷಭೂಷಣದಲ್ಲಿ ಮೈದಾನಕ್ಕೆ ಬಂದ ಜನರು ಕೂಡ ನೆರೆದವರನ್ನು ರಂಜಿಸಿದರು.
ಈ ಬಾರಿ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ ಹಾಗೂ ಬೃಹತ್ ಗಾತ್ರದ ಪಂಜುರ್ಲಿ ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾಯಿತು. ತೋಳ, ಕೋಸ್ಟ್ ಗಾರ್ಡ್‌ನ ವಿಮಾನ, ವಿವಿಧ ದೇವರ ಮಾದರಿಗಳನ್ನು ಸಹ ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ ಕೋಣ, ಯಕ್ಷಗಾನ, ಅಯ್ಯಪ್ಪ ಸ್ವಾಮಿ ಮಹಿಮೆ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನು ನಡೆಸಲಾಯಿತು.
ಈ ಹಿಂದೆ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಲು ಇಂಗ್ಲೀಷ್ ಭಾಷೆ ಬಾರದ ಹಾಲಕ್ಕಿ ಸಮುದಾಯವರು ಈ ದಿಂಡಿ ಜಾತ್ರೆ ವೇಳೆ ಅಣುಕು ಪ್ರದರ್ಶನ ನಡೆಸುತ್ತಿದ್ದರು. ವಿವಿಧ ಬಗೆಯ ವೇಷ ತೊಟ್ಟು ಬ್ರಿಟಿಷರ ದಬ್ಬಾಳಿಕೆಯೆನ್ನು ಅವರ ಎದುರೇ ಅಣಕಿಸುತ್ತಿದ್ದರಂತೆ. ಇಂದಿಗೂ ಆ ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದು, ಪ್ರತಿವರ್ಷ ದಿಂಡಿ ಉತ್ಸವದಲ್ಲಿ ಅಣುಕು ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿರುತ್ತದೆ.
'ಪ್ರಸ್ತುತ ಆಗು ಹೋಗುಗಳ ಬಗ್ಗೆ ಹಾಗೂ ಇತರ ವಿಚಾರಗಳನ್ನು ವಿಡಂಬನಾತ್ಮಕವಾಗಿ ಪ್ರದರ್ಶನ ಮಾಡಿ ಸರ್ಕಾರ ಇಲ್ಲವೇ ಸಂಬಂಧಪಟ್ಟವರನ್ನು ಎಚ್ಚರಿಸುವ ಪ್ರಯತ್ನ ನಡೆಸಲಾಗುತ್ತದೆ' ಎಂದು ಗ್ರಾಮದ ಕಲಾವಿದ ಪುರುಷೋತ್ತಮ ಗೌಡ ತಿಳಿಸಿದ್ದಾರೆ.

ಇನ್ನು ಈ ಅಣುಕು ಪ್ರದರ್ಶನಕ್ಕೆ ತಿಂಗಳಿನಿಂದ ತಯಾರಿ ಮಾಡಿಕೊಳ್ಳುವ ಹಾಲಕ್ಕಿ ಸಮುದಾಯದವರು ಯಾವುದೇ ಆರ್ಥಿಕ ಸಹಾಯ ಪಡೆಯದೆ ಸ್ವಂತ ಖರ್ಚಿನಲ್ಲಿ ಮಾಡುತ್ತಾರೆ. ಈ ಮೂಲಕ ಊರಿನಲ್ಲಿ ಒಗ್ಗಟ್ಟಾಗಿ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನ ನಡೆಸುತ್ತಾರೆ. 'ದಂಡಿ ಉತ್ಸವ ವೀಕ್ಷಿಸಲು ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಆಗಮಿಸುವುದರಿಂದ ಪ್ರೋತ್ಸಾಹ ಸಿಕ್ಕಂತಾಗಿ ಪ್ರತಿ ವರ್ಷವೂ ತಪ್ಪದೆ ಈ ಅಣಕು ಪ್ರದರ್ಶನ ನಡೆಸಲಾಗುತ್ತಿದೆ' ಎಂದು ಹಾಲಕ್ಕಿ ಸಮುದಾಯದ ಸಂಜೀವ್ ತೆಂಡೂಲ್ಕರ್ ಖುಷಿ ಹಂಚಿಕೊಂಡಿದ್ದಾರೆ.
ವಿವಿಧ ಬಗ್ಗೆ ಅಣುಕು ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ಆಮದಳ್ಳಿ ಗ್ರಾಮದಲ್ಲಿ ನಡೆಯುವ ದಿಂಡಿ ಜಾತ್ರೆ ವಿಶೇಷವಾಗಿದೆ. ಇನ್ನು ಇಂದಿಗೂ ತಮ್ಮ ಸಂಪ್ರದಾಯವನ್ನು ಉಳಿಸಲು ಹಾಲಕ್ಕಿ ಸಮುದಾಯವರು ಉತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ.