ರಸ್ತೆ ಅಪಘಾತ; ಗಾಯಗೊಂಡವರಿಗೆ ನೆರವಾದ ಸಚಿವರು
ಕಾರವಾರ, ಮಾರ್ಚ್ 01: ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದ ಮಗು ಹಾಗೂ ದಂಪತಿಯನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಸ್ಪತ್ರೆಗೆ ಸೇರಿಸಲು ನೆರವಾದರು.
ಕುಮಟಾ ಪಟ್ಟಣದ ಮನ್ಸೂರ್ ಶೇಖ್ ಹಾಗೂ ನಜಿಯಾ ಶೇಖ್ ಎನ್ನುವವರು ತಮ್ಮ ಮೂರು ವರ್ಷದ ಮಗು ಸಾಧಿಖ್ ಜೊತೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೆರಳುವಾಗ ನಾಯಿ ಅಡ್ಡ ಬಂದಿದೆ.
ಈ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮೂವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅದೇ ಹೊತ್ತಿಗೆ ಅದೇ ಮಾರ್ಗದಲ್ಲಿ ಉಡುಪಿಯಿಂದ ಶಿರಸಿಯ ಸ್ವರ್ಣವಲ್ಲಿ ಮಠದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರು ನಿಲ್ಲಿಸಿ ವಿಚಾರಿಸಿದ್ದಾರೆ.

ಅಂಬುಲೆನ್ಸ್ ಬರದ ಕಾರಣ ತಮ್ಮದೇ ಕಾರಿನಲ್ಲಿ ಗಾಯಗೊಂಡವರನ್ನು ಹೊಳೆಗದ್ದೆ ಟೋಲ್ ಗೇಟ್ ವರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಆಂಬುಲೆನ್ಸ್ ಮೂಲಕ ಕುಮಟಾದ ತಾಲೂಕು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ಬಳಿಕ ಗಾಯಗಳನ್ನು ಕುಮಟಾ ತಾಲೂಕು ಆಸ್ಪತ್ರೆಯಿಂದ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಸಮಯಕ್ಕೆ ಸರಿಯಾಗಿ ಗಾಯಾಳುಗಳು ಆಸ್ಪತ್ರೆ ಸೇರಿಸಲು ನೆರವಾದ ಸಚಿವರ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications