ಮನೆ ಸದಸ್ಯನಂತೆ ಸಾಕಿದ್ದ ಕೋತಿ ಸಾವು: ಕಣ್ಣೀರಿಟ್ಟ ಕುಟುಂಬಸ್ಥರು
ಕಾರವಾರ, ಅಕ್ಟೋಬರ್ 14: ಸಾಮಾನ್ಯವಾಗಿ ಕಾಡು ಪ್ರಾಣಿಗಳು ಮನುಷ್ಯರೊಂದಿಗೆ ಬೆರೆಯುವುದು ಅಪರೂಪ. ಒಂದೊಮ್ಮೆ ಬೆರೆತಾಗ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮನುಷ್ಯನ ಸ್ವಭಾವ. ಅವುಗಳಿಗೆ ಚಂದದ ಹೆಸರನ್ನು ಇಟ್ಟು ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ.
ತಮ್ಮ ಮನೆಯ ಸದಸ್ಯನಂತೆ ಜೊತೆಗಿದ್ದ, ಉತ್ತಮ ಬಾಂಧವ್ಯದಲ್ಲಿದ್ದ ಪ್ರಾಣಿಗಳ ಅಗಲಿಕೆಯೂ ಮನುಷ್ಯನಿಗೆ ಅತೀವ ದುಃಖ ಕೊಡಬಲ್ಲದು ಎನ್ನುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಕಳೆದ ಮೂರು ವರ್ಷದಿಂದ ಸಾಕಿ ಸಲುಹಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಕ್ಕೆ ಮಕ್ಕಳು, ಮನೆ ಮಂದಿ ಹಾಗೂ ಗ್ರಾಮಸ್ಥರು ಕಣ್ಣೀರ ವಿದಾಯ ಹೇಳಿದ್ದಾರೆ. ಮನೆಯ ಸದಸ್ಯನನ್ನೇ ಕಳೆದುಕೊಂಡಂತೆ ಊಟ ತಿಂಡಿ ಬಿಟ್ಟು ದುಃಖಿಸಿದ್ದಾರೆ.

ಎಲ್ಲರ ಜೊತೆಗೆ ಅನ್ಯೋನ್ಯತೆ ಸೃಷ್ಟಿಸಿಕೊಂಡಿದ್ದ ಬಾಂಧವ್ಯ
ದಾಂಡೇಲಿ ಪಟ್ಟಣದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎನ್ನುವವರ ಮನೆಯಲ್ಲಿ ಕೋತಿ ಮರಿಯೊಂದು ವಾಸವಿತ್ತು. ಆ ಕೋತಿ ಮರಿಗೆ ರಾಮು ಎಂದು ಹೆಸರನ್ನೂ ಕೂಡ ಇಡಲಾಗಿತ್ತು. ಕಂಜರಪೇಟೆ ಗಲ್ಲಿಯಲ್ಲಿ ಓಡಾಡಿಕೊಂಡು, ಗ್ರಾಮಸ್ಥರೊಂದಿಗೆ ಅನ್ಯೋನ್ಯತೆಯಿಂದಿದ್ದ ರಾಮು, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ರಾಮು ಕೋತಿ ಮರಿಯನ್ನು ಕಂಡರೆ ಊರಿನ ಮಕ್ಕಳಿಗೂ ಗ್ರಾಮಸ್ಥರಿಗೂ ಅಷ್ಟೇ ಪ್ರೀತಿ ಕೂಡ ಇತ್ತು. ರಾಮುನನ್ನು ನೋಡುವುದಕ್ಕಾಗಿಯೇ ಊರಿನ ಜನರು ಆಗಾಗ ಬಂದು ಹೋಗುವಷ್ಟು ಅನ್ಯೋನ್ಯತೆ ಸೃಷ್ಟಿಸಿಕೊಂಡಿದ್ದ.

ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ರಾಮು ಸಾವು
ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮುಗೆ ಸ್ಥಳೀಯ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲು ಶಿಫಾರಸು ಮಾಡಿದ್ದರು. ಅದರಂತೆ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಕೋತಿ ಮರಿ ಕೊನೆಯುಸಿರೆಳೆದಿದೆ. ಕೋತಿ ಮರಿ ರಾಮುವಿನ ಮೃತದೇಹವನ್ನು ಪುನಃ ಮನೆಗೆ ತಂದಾಗ ಕುಟುಂಬಸ್ಥರು ದುಃಖಿಸಿದ್ದಾರೆ. ಬಳಿಕ ರಾಮುವಿನ ಶವಕ್ಕೆ ಪೂಜೆ ಮಾಡಿ ಧಾರ್ಮಿಕ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ವೇಳೆ ರೆಹೋನೆತ್ ಅವರ ಮನೆಯ ಮಕ್ಕಳು, ಮಹಿಳೆಯರು, ಹಿರಿಯರು ಹಾಗೂ ಗ್ರಾಮಸ್ಥರು ಎಲ್ಲರೂ ಕಣ್ಣೀರು ಹಾಕಿದ್ದಾರೆ.

ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಕಪಿರಾಯ
ಕೋತಿ ರಾಮು ಎರಡು ಮೂರು ವರ್ಷಗಳ ಹಿಂದೆ ಎಲ್ಲ ಕೋತಿಗಳಂತೆ ಕಾಡಿನಲ್ಲಿತ್ತು. ಕಾಡಿನಲ್ಲಿ ತಿರುಗಾಡಿಕೊಂಡು, ಕಪಿ ಚೇಷ್ಠೆ ಮಾಡಿಕೊಂಡಿತ್ತು. ಒಂದು ದಿನ ಮರದಿಂದ ಮರಕ್ಕೆ ಹಾರುತ್ತಾ ಮಂಗನಾಟ ಆಡುವ ವೇಳೆ ಆಕಸ್ಮಾತ್ ಆಗಿ ಕಂಜರಪೇಟೆ ವ್ಯಾಪ್ತಿಯಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿತ್ತು. ಈ ವೇಳೆ ಕಂಜರಪೇಟೆ ಗ್ರಾಮಸ್ಥರು ಈ ಕೋತಿಯನ್ನು ಹಿಡಿದು, ಶುಷ್ರೂಷೆ ನೀಡಿದ್ದರು. ವೈದ್ಯರಿಂದ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದ್ದರು. ಕೊಂಚ ಚೇತರಿಸಿಕೊಂಡ ಬಳಿಕ ಈ ಕೋತಿ ಮರಿಯನ್ನು ಪುನಃ ಕಾಡಿನತ್ತ ಬಿಡಲಾಗಿತ್ತು.

ಮೂರು ವರ್ಷಗಳಿಂದ ಕೋತಿ ರಾಮು ಪ್ರೀತಿ
ಚಿಕಿತ್ಸೆ ಸಮಯದಲ್ಲಿ ಗ್ರಾಮಸ್ಥರಿಗೆ ಹೊಂದಿಕೊಂಡಿದ್ದ ರಾಮು, ವಾಸಪ್ ತನಗೆ ಆರೈಕೆ ನೀಡಿದ್ದ ಕಂಜರಪೇಟೆ ಗ್ರಾಮಕ್ಕೆ ಬಂದಿತ್ತು. ಇದನ್ನು ಕಂಡ ಗ್ರಾಮದ ರೆಹೋನೆತ್, ಮರಿಯನ್ನು ಮನೆಗೆ ತಂದು ಸಾಕಿದ್ದರು. ಮನೆಯ ಸದಸ್ಯರು ರಾಮು ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದರು. ಮಕ್ಕಳೆಲ್ಲ ಈ ಕೋತಿಯೊಂದಿಗೆ ಸಲುಗೆಯಿಂದ, ಆಟವಾಡಿಕೊಂಡಿದ್ದರು. ಹೀಗೆ ಎರಡು ಮೂರು ವರ್ಷಗಳಿಂದ ಗ್ರಾಮದಲ್ಲಿ ಓಡಾಡಿಕೊಂಡಿದ್ದ ರಾಮುವನ್ನು ಗ್ರಾಮಸ್ಥರು ಪ್ರೀತಿಯಿಂದ ನೋಡಿಕೊಂಡಿದ್ದರು. ಇದೀಗ ಕೋತಿ ರಾಮು ಅಗಲಿಕೆಯಿಂದಾಗಿ ಇಡೀ ಊರಿಗೆ ಶೋಕದ ಛಾಯೆ ಆವರಿಸಿದೆ.












Click it and Unblock the Notifications