ಭಾರೀ ಗಾಳಿ, ಮಳೆ ಮುನ್ಸೂಚನೆ: ಕಾರವಾರ ಕಡಲತೀರದಲ್ಲಿ ಲಂಗರು ಹಾಕಿದ ಬೋಟ್‌ಗಳು
ಕಾರವಾರ, ಅಕ್ಟೋಬರ್, 01: ಹವಮಾನ ವೈಪರೀತ್ಯದಿಂದಾಗಿ ಆಳ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಪರಿಣಾಮ ಮೀನುಗಾರಿಕೆಗೆ ತೆರಳದ ಮೀನುಗಾರಿಕಾ ಬೋಟ್‌ಗಳು ಕಾರವಾರ ಸೇರಿದಂತೆ ಕರಾವಳಿ ತೀರದ ಕಡಲತೀರಗಳಲ್ಲಿ ಲಂಗರು ಹಾಕಿ ಆಶ್ರಯ ಪಡೆದುಕೊಂಡಿದೆ.
ಕಳೆದ ಎರಡ್ಮೂರು ದಿನದಿಂದ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ ಸ್ಥಳೀಯ, ಜಿಲ್ಲೆ ಹಾಗೂ ಅಂತರ್ ರಾಜ್ಯದ ಮೀನುಗಾರಿಕೆ ಬೋಟ್‌ಗಳು ನಗರದ ಕಡಲತೀರಕ್ಕೆ ಆಗಮಿಸಿ ಲಂಗರು ಹಾಕಿವೆ. ಈವರೆಗೆ ಸುಮಾರು 300ಕ್ಕೂ ಹೆಚ್ಚು ಬೋಟ್‌ಗಳು ಟ್ಯಾಗೋರ್ ಹಾಗೂ ಬಂದರು ತೀರ ಪ್ರದೇಶಗಳಲ್ಲಿ ಲಂಗರು ಹಾಕಿವೆ.

ಇನ್ನು ಕಡಲಿನಲ್ಲಿ ಅಲೆಗಳ ಭೋರ್ಗರೆತ ಜೋರಾಗಿದ್ದು, ಪ್ರವಾಸಿಗರಿಗೆ ಎಚ್ಚರಿಕೆಯಾಗಿ ರೆಡ್ ಫ್ಲ್ಯಾಗ್‌ಗಳನ್ನು ಅಳವಡಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದೇ ಪ್ರವಾಸಿಗರು ಕಡಲಿಗಿಳಿದು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಈಗಾಗಲೇ ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಮಳೆಯಾಗುತ್ತಿರುವ ಕಾರಣ ಕಡಲು ಪ್ರಕ್ಷುಬ್ಧಗೊಂಡಿದೆ. ಕೊಂಚ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಆಂಕರ್ ತುಂಡಾಗಿ ಎರಡು ಮೀನುಗಾರಿಕಾ ಬೋಟ್‌ಗಳು ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ದಡಕ್ಕೆ ಅಪ್ಪಳಿಸಿವೆ. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬಂದರಿನಲ್ಲಿ ಲಂಗರು ಹಾಕಿದ್ದವು. ಆದರೆ ಭಾರಿ ಗಾಳಿ ಮಳೆ ಹಿನ್ನೆಲೆ ಆಂಕರ್ ತುಂಡಾಗಿ ಕಡಲತೀರಕ್ಕೆ ಬಂದು ಅಪ್ಪಳಿಸಿದೆ. ಬೋಟಿನಲ್ಲಿದ್ದ ಮೀನುಗಾರರು ಸುರಕ್ಷಿತವಾಗಿದ್ದಾರೆ. ಸದ್ಯ ಬೋಟ್‌ಗಳು ದಡದಲ್ಲಿ ಹೂತುಕೊಂಡಿರುವ ಕಾರಣ ತೆರವಿಗೆ ಟಗ್‌ಗಳ ಮೂಲಕ ಮೀನುಗಾರರು ಬಂದರು ಅಧಿಕಾರಿಗಳನ್ನು ಕೋರಿದ್ದಾರೆ.
ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಇನ್ನು 3 ರಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಂತಹ ಘಟನೆಗಳು ಸಂಭವಿಸಿದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ.
ಮೀನುಗಾರಿಕೆಗೆ ತೆರಳದಂತೆ ಸೂಚನೆ
ಸಮುದ್ರ ಪ್ರಕ್ಷುಬ್ಧಗೊಂಡಿರುವ ಕಾರಣ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಲ್ಲಾ ಮೀನುಗಾರರಿಗೆ ಅಗತ್ಯ ಮಾಹಿತಿಯನ್ನು ಮೀನುಗಾರಿಕಾ ಇಲಾಖೆ ತಲುಪಿಸಬೇಕು. ಮನೆ ಕುಸಿತದಿಂದ ಜೀವಹಾನಿ ಹಾಗೂ ಜಾನುವಾರು ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಪಂಚಾಯಿತಿ ಮೂಲಕ ಜಾಗೃತಿ ಮುಡಿಸುವಂತೆ ಹಾಗೂ ತೀರಾ ಹಳೆಯ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಮಳೆ ನಿಲ್ಲುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಲು ಸೂಚಿಸಿದರು.
ಶೀಘ್ರವೇ ಪರಿಹಾರ ವಿತರಿಸುವಂತೆ ಸೂಚನೆ
ಗ್ರಾಮಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು. ಮುಂಜಾಗೃತವಾಗಿ ಕಾಳಜಿಕೇಂದ್ರ ತೆರೆಯಲು ಸ್ಥಳ ಗುರುತಿಸಿಕೊಟ್ಟುಕೊಳ್ಳಬೇಕು. ದೋಣಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಮಳೆಯಿಂದ ಹಾನಿಯಾದ ಪ್ರಕರಣಗಳಲ್ಲಿ ಆದಷ್ಟು ಶೀಘ್ರದಲ್ಲಿ ಪರಿಹಾರ ವಿತರಿಸುವಂತೆ ಸೂಚನೆ ನೀಡಿದ ಅವರು ಪರಿಹಾರ ನೀಡಲು ಹಣದ ಕೊರತೆಯಿಲ್ಲ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಅಂಕೋಲ ಮತ್ತು ಹೊನ್ನಾವರದಲ್ಲಿ ಇರುವ SDRF ತಂಡಗಳಿಗೆ ಅಗತ್ಯ ಬಿದಲ್ಲಿ ತಕ್ಷಣ ನೆರವಿಗೆ ಸಿದ್ಧವಿರುವಂತೆ ಸೂಚನೆ ನೀಡಿದರು. ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆ ಪ್ರದೇಶದಲ್ಲಿ ವಾಸಿಸುಸುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡುವಂತೆ ತಿಳಿಸಿದರು.












Click it and Unblock the Notifications