ಗೋಕರ್ಣ ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ
ಕಾರವಾರ, ಮಾರ್ಚ್ 11: ಶಿವರಾತ್ರಿ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದು, ಅಲೆಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಗುರುವಾರ ನಡೆದಿದೆ.
ಮಹಾರಾಷ್ಟ್ರದಿಂದ ಶಿವರಾತ್ರಿ ನಿಮಿತ್ತ ಗೋಕರ್ಣಕ್ಕೆ ಆಗಮಿಸಿದ್ದ 15 ಜನ ಪ್ರವಾಸಿಗರು, ಶಿವ ದರ್ಶನಕ್ಕೂ ಮೊದಲು ಸಮುದ್ರ ಸ್ನಾನಕ್ಕೆ ತೆರಳಿದ್ದರು.
ಈ ವೇಳೆ ನೀರಿನಲ್ಲಿ ಈಜಾಡುತ್ತಿರುವಾಗ ಅಲೆಗಳಿಗೆ ಸಿಲುಕಿದ ಭೂಪೇಂದ್ರ ಸಿಂಗ್ (48) ಶಿವಸಿಂಗ್ ರಜಪೂತ್ (52), ಯುವರಾಜ್ (45), ಯೋಗೇಂದ್ರ ರಜಪೂತ್ (38) ಕೊಚ್ಚಿ ಹೋಗುತ್ತಿದ್ದರು.

ತಕ್ಷಣ ಈ ಬಗ್ಗೆ ತಿಳಿದ ಲೈಫ್ ಗಾರ್ಡ್ ರಾಜು ಅಂಬಿಗ, ಮಾರುತಿ ವಿಶ್ವಾಸ್, ಶೇಖರ್ ಎಂಬುವವರು ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ದಕ್ಷಿಣ ಕಾಶಿ ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲೂ ಸಹ ಶಿವರಾತ್ರಿ ವೈಭವ ಕಳೆಕಟ್ಟಿದೆ. ಶಿವನ ಆತ್ಮಲಿಂಗವಿರುವ ಕ್ಷೇತ್ರವಾಗಿರುವ ಹಿನ್ನಲೆ ಶಿವರಾತ್ರಿಯಂದು ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಕೊರೊನಾ ಅಬ್ಬರದಿಂದಾಗಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಹೆಚ್ಚಿನ ಜನಜಂಗುಳಿ ಇಲ್ಲದೇ ಶಿವರಾತ್ರಿ ಆಚರಣೆ ನಡೆದಿದೆ.












Click it and Unblock the Notifications