ಹಳಿಯಾಳದಲ್ಲಿ ಮೆಕ್ಕಾ-ಮದೀನಾದಿಂದ ವಾಪಸ್ಸಾದ 14 ಮಂದಿಗೆ ಗೃಹಬಂಧನ
ಕಾರವಾರ, ಮಾರ್ಚ್ 14: ಹಳಿಯಾಳದಲ್ಲಿ ಮೆಕ್ಕಾ ಮದೀನಾಗೆ ಹೋಗಿ ಬಂದವರಿಗೆ ಕೊರೊನಾ ವೈರಸ್ ತಗುಲಿದೆಯೇ ಎಂಬ ಬಗ್ಗೆ ಶುಕ್ರವಾರ ಪರೀಕ್ಷೆ ಮಾಡಲಾಗಿದೆ.
ಹಳಿಯಾಳದಿಂದ ಮೆಕ್ಕಾಕ್ಕೆ ತೆರಳಿದ್ದ 14 ಜನರು ಫೆ.27, 28ರಂದು ಹಳಿಯಾಳಕ್ಕೆ ವಾಪಸ್ ಬಂದಿದ್ದಾರೆ. ಇವರು ಹಳಿಯಾಳಕ್ಕೆ ಬಂದು 14 ದಿನಗಳು ಕಳೆದಿವೆ. ವಿಶ್ವದೆಲ್ಲೆಡೆ ಕೊರೊನಾ ವೈರಸ್ ವ್ಯಾಪಿಸಿದ್ದು, ಮೆಕ್ಕಾ- ಮದೀನಾದ ಮೇಲೂ ಕೊರೊನಾ ವೈರಸ್ ಪರಿಣಾಮ ಬೀರಿದೆ.
ಹೀಗಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ನಿರ್ದೇಶನದ ಮೇರೆಗೆ ಹಳಿಯಾಳದ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಈ 14 ಜನರ ಮನೆಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಇವರಲ್ಲಿ ರೋಗದ ಯಾವುದೇ ಗುಣಲಕ್ಷಣಗಳು ಕಂಡುಬಂದಿಲ್ಲ ಎಂದು ಹಳಿಯಾಳ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ ತಿಳಿಸಿದ್ದಾರೆ.

ರೋಗ ಪರೀಕ್ಷೆಯ ಬಳಿಕ ಇವರನ್ನು ಹೊರಗೆ ಹೋಗದಂತೆ, ಮನೆಯಲ್ಲಿಯೇ ಸ್ವಲ್ಪ ದಿನ ಕಳೆಯುವಂತೆ, ಸ್ವಚ್ಛತೆ ಕಾಪಾಡುವಂತೆ, ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ರಮೇಶ ಕದಂ ತಿಳಿಸಿದ್ದಾರೆ.
ವಿದೇಶದಿಂದ ಇತ್ತೀಚೆಗೆ ವಾಪಸ್ ಬಂದಿರುವ, ಜಿಲ್ಲೆಯಲ್ಲಿರುವ ಎಲ್ಲ ವ್ಯಕ್ತಿಗಳನ್ನು ಅವರ ಮನೆಯಲ್ಲಿಯೇ ಇಟ್ಟು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರೀಶಕುಮಾರ್ ತಿಳಿಸಿದ್ದಾರೆ.












Click it and Unblock the Notifications