ಕೊರೊನಾ ಎಫೆಕ್ಟ್: ಕಾರವಾರದ ಪಾರ್ಶ್ವವಾಯು ಆಸ್ಪತ್ರೆ ಕ್ಲೋಸ್
ಕಾರವಾರ, ಮಾರ್ಚ್ 17: ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಭೀತಿಯಿಂದಾಗಿ ಕಾರವಾರ ತಾಲ್ಲೂಕಿನ ಹಳಗಾ ಗ್ರಾಮದಲ್ಲಿರುವ ಸೇಂಟ್ ಮೇರಿ ಪಾರ್ಶ್ವವಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಏಕಾಏಕಿ ಬಂದ್ ಮಾಡಲಾಗಿದೆ. ಇದರಿಂದಾಗಿ ಪಾರ್ಶ್ವವಾಯು ಪೀಡಿತ ರೋಗಿಗಳು ಪರದಾಡುವಂತಾಗಿದೆ.
ಸೇಂಟ್ ಮೇರಿ ಆಸ್ಪತ್ರೆ ಪಾರ್ಶ್ವವಾಯು ಚಿಕಿತ್ಸೆಗೆ ಸಾಕಷ್ಟು ಪ್ರಸಿದ್ಧವಾಗಿದ್ದು, ಇಲ್ಲಿನ ಆಸ್ಪತ್ರೆಗೆ ಬೆಂಗಳೂರು, ಕೋಲಾರ, ಬೀದರ್ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ನೂರಾರು ರೋಗಿಗಳು ಆಗಮಿಸುತ್ತಾರೆ.
ಆದರೆ, ಸದ್ಯ ಎಲ್ಲೆಡೆ ಕೊರೊನಾ ಸೋಂಕು ಭೀತಿ ಆವರಿಸಿರುವ ಹಿನ್ನೆಲೆ ಹೆಚ್ಚು ಜನರು ಒಂದೆಡೆ ಸೇರದಂತೆ ಮುನ್ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಂದ್ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ.

ಪಾರ್ಶವಾಯು ಆಸ್ಪತ್ರೆ ಬಂದ್ ಮಾಡಿದ ಗ್ರಾಮಸ್ಥರು
ಯಾವುದೇ ರೋಗಿಗಳನ್ನು ಒಳತೆಗೆದುಕೊಳ್ಳದೇ ವಾಪಸ್ ತೆರಳುವಂತೆ ತಿಳಿಸಿದ್ದು, ಇದರಿಂದಾಗಿ ದೂರದ ಊರುಗಳಿಂದ ಬಂದಿದ್ದ ರೋಗಿಗಳು ಪರದಾಡುವಂತಾಗಿದೆ. ಅಲ್ಲದೇ ಗ್ರಾಮಸ್ಥರು ಸಹ ಕೊರೊನಾ ಹರಡುವ ಆತಂಕ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದವರಿಗೆ ರೋಗಿಗಳನ್ನ ವಾಪಸ್ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಇದರಿಂದ ರೋಗಿಗಳನ್ನು ಕರೆತಂದವರು ಕಂಗಾಲಾಗುವಂತಾಗಿದೆ.
ಹಳಗಾ ಗ್ರಾಮ ಕಾರವಾರದಿಂದ ಸುಮಾರು 26 ಕಿಲೋ ಮೀಟರ್ ದೂರದಲ್ಲಿದ್ದು, ಬೆಂಗಳೂರು, ಬೀದರ್, ದಾವಗೆರೆ ಭಾಗಗಳಿಂದ ಬರುವವರು 300 ರಿಂದ 600 ಕಿಲೋ ಮೀಟರ್‌ವರೆಗೆ ಪ್ರಯಾಣ ಮಾಡಿಕೊಂಡೇ ಬರಬೇಕು.

ರೋಗಿಗಳ ಪರದಾಟ
ಅಲ್ಲದೇ ಬಹುತೇಕ ಎಲ್ಲರೂ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಬರುವುದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆಗೆಂದು ಬರುತ್ತಾರೆ.
ಆದರೆ, ಏಕಾಏಕಿ ಚಿಕಿತ್ಸೆ ನೀಡದೇ ಆಸ್ಪತ್ರೆ ಬಂದ್ ಮಾಡಿದ್ದರಿಂದಾಗಿ ಜನರು ಪರದಾಡುವಂತಾಗಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿದ್ದು ವ್ಯರ್ಥವಾಗುವಂತಾಗಿದೆ. ಇನ್ನು ಆಸ್ಪತ್ರೆ ಎದುರು ಸೇರಿದ ರೋಗಿಗಳ ಸಂಬಂಧಿಗಳು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಮನವಿ ಮಾಡಿದ್ದು, ಸದ್ಯ ಬಂದಿರುವ ರೋಗಿಗಳಿಗಾದರೂ ಚಿಕಿತ್ಸೆ ನೀಡುವಂತೆ ಕೇಳಿಕೊಂಡರು.

ಸದ್ಯ ಆಸ್ಪತ್ರೆ ಆವರಣದಲ್ಲಿ ಚಿಕಿತ್ಸೆ
ಆಸ್ಪತ್ರೆಯಲ್ಲಿ ಜನರನ್ನು ಸೇರಿಸದಂತೆ ಗ್ರಾಮ ಪಂಚಾಯತ್ ವತಿಯಿಂದ ಆದೇಶ ಮಾಡಿದ್ದರಿಂದಲೇ ಚಿಕಿತ್ಸೆ ನಿಲ್ಲಿಸಿದ್ದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿಕೊಂಡಿದ್ದು, ರೋಗಿಗಳ ಹಿತದೃಷ್ಟಿಯಿಂದಾಗಿ ಸದ್ಯ ಬಂದಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ.
ಮಂಗಳವಾರ ವಿವಿಧೆಡೆಗಳಿಂದ ಸುಮಾರು 50 ಕ್ಕೂ ಅಧಿಕ ಮಂದಿ ಪಾರ್ಶ್ವವಾಯು ಪೀಡಿತರು ಆಗಮಿಸಿದ್ದು, ಅವರನ್ನು ಆಸ್ಪತ್ರೆ ಆವರಣದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕೂರಿಸಿ ಚಿಕಿತ್ಸೆ ನೀಡಲಾಯಿತು.

ಮಾರ್ಚ್ ಅಂತ್ಯದವರೆಗೂ ಆಸ್ಪತ್ರೆ ಬಂದ್
ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಸೋಲೇಟೆಡ್ ವಾರ್ಡ್ ಅನ್ನು ಸಿದ್ಧಪಡಿಸಿಕೊಂಡಿದ್ದು, ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಅಂತವರನ್ನು ಪ್ರತ್ಯೇಕವಾಗಿರಿಸಿ, ಬಳಿಕ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಸಹ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಆದರೆ, ಗ್ರಾಮಸ್ಥರ ಒತ್ತಾಯದಿಂದಲೇ ಆಸ್ಪತ್ರೆಯನ್ನು ಬಂದ್ ಮಾಡುತ್ತಿದ್ದು, ಬುಧವಾರದಿಂದ ಮಾರ್ಚ್ ಅಂತ್ಯದವರೆಗೆ ಆಸ್ಪತ್ರೆ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications