ಕಾರವಾರದಲ್ಲಿ ಯುವಕನನ್ನು ಬೆನ್ನಟ್ಟಿ ಸಾಯಿಸಿದ ಬೀದಿ ನಾಯಿಗಳು
ಕಾರವಾರ, ಆಗಸ್ಟ್.20: ಬೀದಿ ನಾಯಿ ದಾಳಿಗೆ ಯುವಕನೊಬ್ಬ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಗರದ ನಂದನಗದ್ದಾದಲ್ಲಿ ನಡೆದಿದೆ.
ದೀಪಕ (ಶಾಣೆ) ನಾಯ್ಕ (30) ಮೃತ ದುರ್ದೈವಿ. ನಂದನಗದ್ದಾದ ಸ್ಮಶಾನದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿತ್ತು. ರಾತ್ರಿಯ ವೇಳೆ ಇಲ್ಲಿ ಸುತ್ತಮುತ್ತ ತಿರುಗಾಡುವವರನ್ನು ನಾಯಿಗಳು ಬೆನ್ನಟ್ಟುತ್ತಿದ್ದವು.
ಭಾನುವಾರ ರಾತ್ರಿ ದೀಪಕ್ ಸ್ಮಶಾನದಲ್ಲಿ ಶೌಚಕ್ಕೆ ತೆರಳಿದ್ದ ವೇಳೆ ನಾಯಿಗಳು ಗುಂಪಾಗಿ ದಾಳಿ ಮಾಡಿವೆ. ಇದರಿಂದಾಗಿ ದೀಪಕ್, ಸೈಕಲ್ ಅನ್ನು ಸ್ಮಶಾನದಲ್ಲೇ ಬಿಟ್ಟು ತಪ್ಪಿಸಿಕೊಳ್ಳಲು ಓಡಿದ್ದಾನೆ. ಆದರೆ, ನಾಯಿಗಳು ಆತನ ಪ್ರಾಣವನ್ನೇ ಬಲಿಪಡೆದುಕೊಂಡಿವೆ . ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ನಗರದಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ, ನಗರಸಭೆ ವ್ಯಾಪ್ತಿಯಲ್ಲೇ ನಾಯಿಗಳು ಹಾಗೂ ದನಗಳು ಜನರ ಸಾವು- ನೋವಿಗೆ ಕಾರಣವಾಗುತ್ತಿವೆ. ಆದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ" ಎಂದು ಸ್ಥಳೀಯರು ಆರೋಪಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.












Click it and Unblock the Notifications