ಕೆಲಸ ಇಲ್ದೆ ಇದು ಮಾಡ್ತಿದ್ದೀನಾ ಹುಷಾರ್ ಎಂದ ಸಚಿವ ಜಮೀರ್- ಎಚ್ಚರಿಕೆ ನೀಡಿದ್ದು ಯಾರಿಗೆ?
ಮಾಡೋಕೆ ಕೆಲ್ಸ ಇಲ್ದೆ ನಾನು ಮೀಟಿಂಗ್ ಮಾಡ್ತಾ ಇದ್ದೀನಾ. ಇಲ್ಲ ಸುಮ್ನೆ ಟೈಮ್ ಪಾಸ್‌ಗೆ ವಖ್ಫ್ ಅದಾಲತ್ ಮಾಡ್ತಿದ್ದೀವಾ ಸರಿಯಾಗಿ ಕೆಲಸ ಮಾಡಿದರೆ ಸರಿ. ಉಡಾಫೆ ಕೆಲಸ ಮಾಡಿದರೆ ಹುಷಾರ್ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ನಿಗಾ ಇಟ್ಕೊಂಡು ಕೆಲಸ ಮಾಡಿ ಇಲ್ಲದಿದ್ದರೆ ಅಷ್ಟೇ ಎಂದು ಹೇಳಿದ್ದಾರೆ.
ಜಮೀರ್ ಅಹ್ಮದ್ ಅವರು ಅಧಿಕಾರಿಗಳ ಮೇಲೆ ಗರಂ ಆಗುವುದು ವಿರಳ. ಆದರೆ, ಈ ವಿಚಾರದಲ್ಲಿ ಅಧಿಕಾರಿಗಳ ವರ್ತನೆಗೆ ಜಮೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ನಿಮ್ಮ ಕೆಲಸದ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ನಾನು ಸಹಿಸುವುದಿಲ್ಲ ಎಂದು ಜಮೀರ್ ಹೇಳಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ಭಾಗಗಳಲ್ಲಿ ವಾಖ್ಫ್ ಅದಾಲತ್ ನಡೆಸಲಾಗುತ್ತಿದೆ. ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಖ್ಫ್ ಅದಾಲತ್ ನಡೆಯುತ್ತಿದೆ. ಇದನ್ನು ಉದ್ದೇಶಿಸಿ ಮಾತನಾಡಿರುವ ಸಚಿವ ಜಮೀರ್, ಕಾಟಾಚಾರಕ್ಕೆ ವಖ್ಫ್ ಅದಾಲತ್ ಮಾಡ್ತಿಲ್ಲ.

ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನದ ಮೇರೆಗೆ ನಾನು ಪ್ರತಿ ಜಿಲ್ಲೆಯಲ್ಲಿ ವಖ್ಫ್ ಅದಾಲತ್ ನಡೆಸಲಾಗುತ್ತಿದೆ. ಇರುವ ಪ್ರಾಬ್ಲಮ್ ಸರಿಪಡಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡ್ಬೇಕು. ಅದನ್ನು ಬಿಟ್ಟು ಉಡಾಫೆ ಧೋರಣೆ ತೋರಿಸಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ತಿಂಗಳಲ್ಲಿ ಆಗಬೇಕು ಜೋಕೆ
ಇನ್ನು ಒಂದೇ ತಿಂಗಳಿನಲ್ಲಿ ವಖ್ಫ್ ಆಸ್ತಿಗೆ ಸಂಬಂಧಿಸಿದಂತೆ ಖಾತೆ, ಒತ್ತುವರಿ ತೆರವು ಹಾಗೂ ಖಾಬರಸ್ಥಾನಕ್ಕೆ ಸಂಬಂಧಿಸಿದಂತೆ ಬಂದಿರುವ ಎಲ್ಲ ಮನವಿಗಳನ್ನು ಇನ್ನೊಂದೇ ತಿಂಗಳಲ್ಲಿ ಪರಿಹರಿಸಬೇಕು. ಜಿಲ್ಲಾ ವಖ್ಫ್ ಅಧಿಕಾರಿಗಳು ಆಸ್ತಿ ಸಂರಕ್ಷಣೆ ಹಾಗೂ ಒತ್ತುವರಿ ತೆರವು ವಿಷಯದಲ್ಲಿ ಅಸಡ್ಡೆ ತೋರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ವಖ್ಫ್ ಅಧಿಕಾರಿಗಳು ನಿರಂತರವಾಗಿ ಜಿಲ್ಲಾಡಳಿತ ಜತೆ ಸಂಪರ್ಕದಲ್ಲಿದ್ದು, ಇರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ವಖ್ಫ್ ಆಸ್ತಿ ದೇವರ ಆಸ್ತಿ. ಇದನ್ನು ರಕ್ಷಣೆ ಮಾಡುವುದು ಪುಣ್ಯದ ಕೆಲಸ ಎನ್ನುವುದನ್ನು ಮರೆಯಬಾರದು. ಇನ್ನು ವಖ್ಫ್ ಅದಾಲತ್ ನಿಂದ ವರ್ಷ ಗಳಿಂದ ನನೆಗುದಿಗೆ ಬಿದ್ದಿದ್ದ ಸಾಕಷ್ಟು ಸಮಸ್ಯೆಗಳು ಬಗೆಹರಿದಿವೆ ಎಂದಿದ್ದಾರೆ. ಇನ್ನು ಒತ್ತುವರಿ ತೆರವು ಸಂಬಂಧ ಕೆಲವು ಪ್ರಕರಣಗಳಲ್ಲಿ ವಖ್ಫ್ ಬೋರ್ಡ್ ಪರ ನ್ಯಾಯಾಲಯದ ಆದೇಶ ಬಂದಿದೆ. ಪೊಲೀಸರ ರಕ್ಷಣೆಯಲ್ಲಿ ತೆರವು ಮಾಡಬೇಕು. ವಖ್ಫ್ ಅಧಿಕಾರಿಗಳು ನಮ್ಮ ಆಸ್ತಿಗೆ ಕಾಂಪೌಂಡ್ ನಿರ್ಮಿಸಿ ಸಂರಕ್ಷಣೆ ಮಾಡಬೇಕು ಎಂದರು.
ವಖ್ಫ್ ಬೋರ್ಡ್‌ನಿಂದ ಬಡವರಿಗೆ ಮನೆ
ಇನ್ನು ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಮನೆ ಇಲ್ಲದಿರುವ ಬಡ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಮಂಡಳಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸಮುದಾಯದಲ್ಲಿ ಬಡವರಿದ್ದು ಅವರಿಗೆ ಈ ಯೋಜನೆ ನೆರವಾಗಲಿದೆ. ವಸತಿ ರಹಿತರ ಸಮೀಕ್ಷೆ ನಡೆಸಿ, ಮನೆ ಇಲ್ಲದವರಿಗೆ ಕಡಿಮೆ ಬಾಡಿಗೆಯಲ್ಲಿ ಮನೆ ನೀಡಲಾಗುವುದು ಎಂದು ಜಮೀರ್ ಹೇಳಿದ್ದಾರೆ.












Click it and Unblock the Notifications