ಬನಾರಸ್ ಮೂಲಕ ಗಾಂಧಿ ನಗರದಲ್ಲಿ ಗುಲ್ಲೆಬ್ಬಿಸಿದ ಝೈದ್ ಖಾನ್!
ಬೆಂಗಳೂರು, ಜುಲೈ 6: ಗಾಂಧಿನಗರಕ್ಕೆ ಆಗಾಗ ಹೊಸಬರ ಪರಿಚಯವಾಗುತ್ತಲೇ ಇರುತ್ತದೆ. ಆದರೆ ಬಂದವರು ನೆಲೆ ನಿಲ್ಲುವುದು ತುಂಬಾ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಿನಿಮಾ ಬರುವ ಮುನ್ನವೇ ಅದರ ತುಣುಕುಗಳನ್ನು ನೋಡಿಯೇ ನಟನ ಮುಂದಿನ ಭವಿಷ್ಯದ ಬಗ್ಗೆ ಗೊತ್ತಾಗಿ ಬಿಡುತ್ತದೆ. ಇದೀಗ ಅಂಥದ್ದೊಂದು ಭರವಸೆಯನ್ನು ಮೂಡಿಸಿರುವುದು ಝೈದ್ ಖಾನ್.
ಬನಾರಸ್ ಸಿನಿಮಾ ಮೂಲಕ ಝೈದ್ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತಿಚೆಗೆ ಬನಾರಸ್ ಸಿನಿಮಾ ಒಂದಷ್ಟು ವಿಚಾರಗಳಿಂದ ಸುದ್ದಿ ಮಾಡುತ್ತಲೇ ಇದೆ. ಇತ್ತೀಚೆಗೆ ಮಾಯಾಗಂಗೆ ಸಾಂಗ್ ನೋಡಿದವರಲ್ಲೆಲ್ಲಾ ಝೈದ್ ಖಾನ್ ಬಗ್ಗೆ ಒಂದಷ್ಟು ಭರವಸೆ ಮಾತುಗಳನ್ನು ಆಡುತ್ತಿದ್ದಾರೆ. ಇಷ್ಟು ಭರವಸೆ ಮೂಡಲು ಕಾರಣವೂ ಇದೆ.
ಸಿನಿಮಾದ ಮೇಲೆ ಝೈದ್ ಖಾನ್ ಬಲು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಇವರು ಸಿನಿಮಾ ರಂಗಕ್ಕೆ ಬರಲೇಬೇಕೆಂಬ ಬಯಕೆ ಇಟ್ಟುಕೊಂಡಿದ್ದವರು. ಸಿನಿಮಾ ಮಾಡಲೇಬೇಕೆಂದು ಹೊರಟರೆ ಅವರೇ ನಿರ್ಮಾಪಕರಾಗುವ ಸ್ಥಿತಿವಂತರೇ ಆಗಿದ್ದಾರೆ.
ಆದರೆ ಅದ್ಯಾವುದನ್ನು ಹತ್ತಿರಕ್ಕೂ ತಂದುಕೊಳ್ಳದೆ ಸಿನಿಮಾಗೆ ಏನೆಲ್ಲಾ ತಯಾರಿ ಬೇಕೋ ಅದೆಲ್ಲವನ್ನು ಪ್ರಾಕ್ಟೀಸ್ ಮಾಡಿಕೊಂಡು ಇದೀಗ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಿನಿ ಪಯಣ ಆರಂಭಿಸುವುದಕ್ಕೂ ಪೂರ್ವದಲ್ಲಿ ಅವರ ಪೂರ್ವತಯಾರಿ ಹೇಗಿತ್ತು ಎನ್ನುವುದು ಈ ಹಾಡಿನ ಮೂಲಕವೇ ಸ್ಪಷ್ಟವಾಗುತ್ತದೆ.

ಸಿನಿಮಾದ ಹಾಡಿನಲ್ಲಿ ಶ್ರಮದ ಅನಾವರಣ: ಸ್ಯಾಂಡಲ್ ವುಡ್ ಅಂಗಳಕ್ಕೆ ಅಂಗಾಲು ಇಟ್ಟಿರುವ ನಟ ಝೈದ್ ಖಾನ್ ಎಷ್ಟರ ಮಟ್ಟಿಗೆ ಪರಿಶ್ರಮ ವಹಿಸಿದ್ದರು ಎನ್ನುವುದು ಒಂದೊಂದು ದೃಶ್ಯದಲ್ಲೂ ಅನಾವರಣಗೊಳ್ಳುತ್ತಿದೆ. ಆ ಮೂಲಕ ಒಂದಿಷ್ಟು ಭರವಸೆ ಮೂಡಿಸಿರುವುದಂತು ಸತ್ಯ. ಬನಾರಸ್ ಸಿನಿಮಾ ಅಂಥ ಭರವಸೆಯ ಮೇಲೆ ಗಾಂಧಿನಗರದಲ್ಲಿ ಗುಲ್ಲಾಗುತ್ತಿದೆ.

ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾ: ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಬಂದಿದೆ. ಬಿಡುಗಡೆಗೂ ಸಿದ್ಧವಾಗಿರುವ ಬನಾರಸ್ ಚಿತ್ರವು ಬರೋಬ್ಬರಿ ಐದು ಭಾಷೆಗಳಲ್ಲಿ ಮಿಂಚಲು ರೆಡಿಯಾಗಿದೆ. ಜಯತೀರ್ಥ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಒಂದೊಳ್ಳೆ ನಾಯಕನನ್ನು ನೀಡುತ್ತಿರುವ ಖುಷಿಯಲ್ಲಿದ್ದಾರೆ. ತಿಲಕರಾಜ್ ಬಲ್ಲಾಳ್ ಬನಾರಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಬನಾರಸ್ ತಾರಾಗಣ: ಝೈದ್ ಖಾನ್ ಮೊದಲ ಚಿತ್ರವಾಗಿರುವ ಬನಾರಸ್ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವೇ ಇದೆ. ನಟ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾಗೆ ಅಜನೀಶ್ ಬಿ ಲೋಕನಾಥ್ ಸಂಗೀತವಿದೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣದಲ್ಲಿ ಇಡೀ ಸಿನಿಮಾ ಮೂಡಿ ಬಂದಿದೆ.












Click it and Unblock the Notifications