Yuva Nidhi Scheme: "ಯುವನಿಧಿ" ಯೋಜನೆಗೆ ಸಿಎಂ ಚಾಲನೆ-ಯಾರೆಲ್ಲ ಭಾಗಿಯಾಗಿದ್ರು ಗೊತ್ತಾ?
ಶಿವಮೊಗ್ಗ, ಜನವರಿ, 12: ಕಾಂಗ್ರೆಸ್ ಮಹತ್ವಾಕಾಂಕ್ಷಿಯ 5 ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಚಾಲನೆ ನೀಡಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇನ್ನು ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ 15 ಮಂದಿ ಯುವಜನರಿಗೆ ಸಾಂಕೇತಿಕವಾಗಿ ನಿರುದ್ಯೋಗ ಭತ್ಯೆಯ ಚೆಕ್ ನೀಡಿದರು.

ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಮಧು ಬಂಗಾರಪ್ಪ, ಬಿ.ನಾಗೇಂದ್ರ, ಮಂಕಾಳ್ ವೈದ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈಗಾಗಲೇ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಚಾಲನೆ ಸಿಕ್ಕಿದ್ದು, ಆನ್‌ಲೈನ್‌ನಲ್ಲಿ ಈವರೆಗೆ 70 ಸಾವಿರಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಂದ ನೋಂದಣಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದೀಗ ಇಂದು 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಚಲನೆ ನೀಡಿದೆ. ಈ ಯೋಜನೆಯ ಪ್ರಕಾರ, ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೋಮಾ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ಪ್ರತಿ ತಿಂಗಳು ಸರ್ಕಾರ ಭತ್ಯೆ ನೀಡುತ್ತದೆ. ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿ, ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿ ಆಗಿರಬೇಕು.
* 2023ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಉತ್ತೀರ್ಣರಾಗಿ 180 ದಿನಗಳಾದರೂ ಉದ್ಯೋಗ ಸಿಗದೆ ನಿರುದ್ಯೋಗಿ ಆಗಿರಬೇಕು.
* ಅರ್ಜಿ ಸಲ್ಲಿಸಿದ ದಿನದಿಂದ ಹುದ್ದೆ ಸಿಗುವವರೆಗೂ ಅಥವಾ 2 ವರ್ಷ ಗರಿಷ್ಠ ಅವಧಿವರೆಗೆ ಮಾತ್ರ ನಿರುದ್ಯೋಗ ಭತ್ಯೆ ಸಿಗಲಿದೆ.
* ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಎಸ್‍ಎಸ್‍ಎಲ್ ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳು ಹಾಗೂ ರೇಷನ್ ಕಾರ್ಡ್ ಬೇಕಾಗುತ್ತದೆ.
* ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾಸಿಂಧು ಪೋರ್ಟ್‌ಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.












Click it and Unblock the Notifications