Bengaluru South: ಎರಡು ರಾಜಕೀಯ ಕುಟುಂಬಗಳಿಗೆ ಪ್ರತಿಷ್ಠೆಯ ಕಣ: ಯುವಕರ ಜಿದ್ದಿನಲ್ಲಿ ಗೆಲುವು ಯಾರಿಗೆ?
ಭಾರತದಲ್ಲಿ ಇನ್ನೇನು ಒಂದೇ ಹಂತದ ಚುನಾವಣೆಗಳು ನಡೆಯುವುದು ಬಾಕಿ ಇದೆ. ಈಗಾಗಲೇ ಆರು ಹಂತದ ಚುನಾವಣೆಗಳು ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ನಿರ್ಧರಿಸಿ ಆಗಿದೆ. ಇನ್ನೇನಿದ್ದರು, ಇವಿಎಂ ಓಪನ್ ಮಾಡಿ ಚುನಾವಣೆಯ ಫಲಿತಾಂಶ ತಿಳಿಯುವುದೊಂದೆ ಬಾಕಿ. ಜೂನ್ 4 ರಂದು ಅಭ್ಯರ್ಥಿಗಳ ಚುನಾವಣ ಭವಿಷ್ಯ ನಿರ್ಧಾರವಾಗಲಿದೆ.
ಈ ಬಾರಿ ಕರ್ನಾಟಕದಲ್ಲಿ ಹಲವು ಕ್ಷೇತ್ರಗಳು ಜನರ ಚಿತ್ತವನ್ನು ಕದ್ದಿವೆ. ಅದರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವೂ ಒಂದು. ಈ ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳು ಯುವಕರಿಗೆ ಟಿಕೆಟ್ ನೀಡಿದ್ದು, ರೋಚಕತೆ ಹೆಚ್ಚಿಸಿದೆ. ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಅವಕಾಶ ನೀಡಿದೆ.

ರಾಜಕೀಯ ಕುಟುಂಬಗಳ ಫೈಟ್
ದಕ್ಷಿಣದ ಯುಕವರ ಫೈಟ್ ರಾಜ್ಯದ ಜನರ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿವೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ. ರಾಮಲಿಂಗಾರೆಡ್ಡಿ ಅವರಿಗೆ ಹಲವು ವರ್ಷದ ರಾಜಕೀಯದ ಅನುಭವ ಇದೆ. ಅಲ್ಲದೆ ಹಲವು ಚುನಾವಣೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಶತಾಯ ಗತಾಯ ತಮ್ಮ ಮಗಳನ್ನು ಈ ಬಾರಿ ದಕ್ಷಿಣ ಕ್ಷೇತ್ರದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಯೋಚನೆಯಲ್ಲಿದ್ದಾರೆ.
ಇನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿರುವ ತೇಜಸ್ವಿ ಸೂರ್ಯ ಅವರಿಗೂ ರಾಜಕೀಯ ಹಿನ್ನೆಲೆ ಇದೆ. ತೇಜಸ್ವಿ ಅವರ ಚಿಕ್ಕಪ್ಪ ಈ ಕ್ಷೇತ್ರದ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ. ಬಿಜೆಪಿ ಮತದಾರರಲ್ಲಿ ಇವರ ಬಗ್ಗೆ ಪ್ರೀತಿ ಇದೆ. ಕೆಲಸವನ್ನು ಮಾಡಿ ಜನರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳಲು ಈ ಕುಟುಂಬ ಈ ಚುನಾವಣೆಯಲ್ಲಿ ಗೆಲುವೊಂದೇ ಅಸ್ತ್ರವನ್ನಾಗಿಸಿಕೊಂಡಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಕಡಿಮೆ ಮತದನಾವಾಗಿದೆ. ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದ ಮತದಾರ ಶೇಕಡಾ 53.15 ಮತ ಚಲಾಯಿಸಿದ್ದಾನೆ. ಇದರಲ್ಲಿ ಯಾರಿಗೆ ಹೆಚ್ಚಿನ ಮತಗಳು ಬೀಳಲಿವೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.
ಸೌಮ್ಯಾಗೆ ಪ್ರತಿಷ್ಠೆಯ ಕಣ
ರಾಜ್ಯದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದೆ ಸೌಮ್ಯಾ ರೆಡ್ಡಿ ನಿರಾಸೆ ಅನುಭವಿಸಿದ್ದರು. 2023ರಲ್ಲಿ ನಡೆದ ಚುನಾವಣೆಯಲ್ಲಿ ಸೌಮ್ಯಾ, 57,781 ಮತಗಳನ್ನು ಪಡೆದಿದ್ದರು. ಆದರೂ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಈ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ 57,797 ಜಯ ಸಾಧಿಸಿದ್ದರು. ಈ ಸೋಲಿನಿಂದ ಹೊರ ಬರಲು ಸೌಮ್ಯಾ ಅವರಿಗೆ ಇದು ಸದಾವಕಾಶ.

ಗೆಲುವೊಂದೇ ಲಕ್ಷ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ತೇಜಸ್ವಿ ಸೂರ್ಯ, ಮತ್ತೊಮ್ಮೆ ಲೋಕಸಭಾ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿಕೆ ಹರಿಪ್ರಸಾದ್ ಅವರನ್ನು ಮಣಿಸಿ, ಗೆಲುವು ದಾಖಲಿಸಿದ್ದರು. ಇವರಿಗೆ ಚಿಕ್ಕಪ್ಪನ ಸಹಕಾರವೂ ಇದೆ. ಇನ್ನೊಮ್ಮೆ ಗೆಲುವು ಸಾಧಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಕನಸು ಕಾಣುತ್ತಿದ್ದಾರೆ.
ಈ ಕ್ಷೇತ್ರವನ್ನು ಅನಂತಕುಮಾರ್ ಪ್ರತಿನಿಧಿಸುತ್ತಿದ್ದರು. ಈ ಕ್ಷೇತ್ರದಲ್ಲಿ ಅವರು ವರ್ಚಸ್ಸು ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತಗಳು ಇದ್ದು, ಮತ್ತೊಂದು ಬಾರಿ ಬಿಜೆಪಿ ಗೆಲುವು ಸಾಧಿಸುವ ಆಸೆಯನ್ನು ಹೊಂದಿದೆ.












Click it and Unblock the Notifications