ಕುಂದಾಪುರದಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್
ಕುಂದಾಪುರ, ಏಪ್ರಿಲ್ 03 : ಭಾರತದಲ್ಲಿ ಲೆದರ್ ಬಾಲ್ ಕ್ರಿಕೆಟ್ ಬಗ್ಗೆ ಜನರಲ್ಲಿ ಎಷ್ಟೇ ಕ್ರೇಜ್ ಇರಲಿ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಗಲ್ಲಿಗಳಲ್ಲಿ ನಡೆಯುವ ಟೆನ್ನಿಸ್ ಬಾಲ್ ಕ್ರಿಕೆಟ್ ಆಟವನ್ನು ನೋಡುವ ಆನಂದವೇ ವಿಶಿಷ್ಟವಾದದ್ದು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಆರಂಭದ ಹಂತದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ಬಾರೀ ಸೆನ್ಸೇಷನ್ ಹುಟ್ಟುಹಾಕಿದ್ದರು. ಖರಗ್ಪುರದಲ್ಲಿ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಆಡುತ್ತಿದ್ದ ಅವರು ಪ್ರತಿ ಪಂದ್ಯಕ್ಕೆ 2000 ರುಪಾಯಿ ಚಾರ್ಜ್ ಮಾಡುತ್ತಿದ್ದರು.

ಹೀಗೆ ಹಲವಾರು ಕ್ರಿಕೆಟ್ ತಾರೆಯರ ನರ್ಸರಿ ಕ್ರಿಕೆಟ್ ನಂತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 'ಟಾರ್ಪೆಡೋಸ್ ಪ್ರೀಮಿಯರ್ ಲೀಗ್ 2017' (ಟಿಪಿಎಲ್-2017) ಕುಂದಾಪುರದಲ್ಲಿ ಏಪ್ರಿಲ್ 14, 15 ಮತ್ತು 16ರಂದು ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಇದು ಸ್ಥಳೀಯರು ಆಡುವ ಕ್ರಿಕೆಟ್ ಪಂದ್ಯಾವಳಿಯಲ್ಲ. ಹೊನಲು ಬೆಳಕಿನಲ್ಲಿ ಆಡಲಾಗುವ ಪಂದ್ಯಾವಳಿಯಲ್ಲಿ ಭಾರತ, ಶ್ರೀಲಂಕಾ, ಸೌದಿ ಅರೇಬಿಯಾ ಮತ್ತು ಕತಾರ್ ದೇಶದ ತಂಡಗಳು ಭಾಗವಹಿಸುತ್ತಿರುವುದು ಭಾರೀ ಕುತೂಹಲ ಹುಟ್ಟಿಸಿದೆ.
If you're in and around Kundapura, please don't miss this tennis ball cricket tournament. pic.twitter.com/IrnRlCaHgV
— Satish Acharya (@satishacharya) 2 April 2017
ದೂರದರ್ಶನ ಮತ್ತು ವೆಬ್ ಸೈಟುಗಳಲ್ಲಿ ಈ ಪಂದ್ಯಗಳ ನೇರ ಪ್ರದರ್ಶನ ಕೂಡ ಇರುತ್ತದೆ. ಪಂದ್ಯದ ರೋಚಕತೆ ಹೆಚ್ಚಿಸಲು ಎರಡು ಎಲ್ಇಡಿ ಸ್ಕ್ರೀನ್ ಮೇಲೆ ಪಂದ್ಯವನ್ನು ಪ್ರಸಾರ ಮಾಡಲಾಗುತ್ತಿದೆ. ಪಂದ್ಯಾವಳಿಯಲ್ಲಿ ಮೊದಲ ಬಹುಮಾನ ಗೆದ್ದವರಿಗೆ 10 ಲಕ್ಷ ರುಪಾಯಿ ಬಹುಮಾನ ಕೂಡ ನೀಡಲಾಗುತ್ತಿದೆ. ಯಾರಿಗೆ ಗೊತ್ತು, ಈ ಪಂದ್ಯಾವಳಿಯಲ್ಲಿ ಮತ್ತೊಬ್ಬ ಧೋನಿ ಹುಟ್ಟಿಕೊಳ್ಳಬಹುದು!











Click it and Unblock the Notifications