ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವೈಕ್ಯತೆಯ ಸಂಗಮ ಕೊಡಗಿನ ಎಮ್ಮೆಮಾಡು ದರ್ಗಾ

By ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

ಎಮ್ಮೆಮಾಡು ದರ್ಗಾವನ್ನು ಕೊಡಗಿನ ಮೆಕ್ಕಾ ಎಂದೇ ಜನಜನಿತವಾಗಿದೆ. ಇದು ಭಾವೈಕ್ಯೆತೆಯ ಸಂಗಮ ಕ್ಷೇತ್ರವೂ ಹೌದು. ಕೊಡಗಿನಲ್ಲಿ ದನಕರುಗಳಿಗೆ ಕಾಯಿಲೆಗಳು ಕಾಣಿಸಿದರೆ, ಜನರ ಇಷ್ಟಾರ್ಥಗಳು ನೆರವೇರದಿದ್ದರೆ ಇಲ್ಲಿಗೆ ಹರಕೆ ಕಟ್ಟಿಕೊಂಡರೆ ಸಾಕು ಜಾತಿಭೇದವಿಲ್ಲದ ಈ ಎಮ್ಮೆಮಾಡು ದರ್ಗಾದಲ್ಲಿ ಕೆಲವೇ ದಿನಗಳಲ್ಲಿ ಆ ಕೆಲಸ ಫಲಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಎಮ್ಮೆಮಾಡು ದರ್ಗಾ ಪ್ರವಾಸಿ ಕ್ಷೇತ್ರವಾಗಿ ಗಮನಸೆಳೆಯುತ್ತಿದೆ. ಇದಕ್ಕೆ ಕಾರಣ ಇಲ್ಲಿರುವ ಐತಿಹಾಸಿಕ ದರ್ಗಾ ಮತ್ತು ನಿಸರ್ಗ ಸೌಂದರ್ಯ. ಎಮ್ಮೆಮಾಡಿಗೆ ಹೋಗಬೇಕಾದರೆ ಕೊಡಗಿನ ಮಡಿಕೇರಿಯಿಂದ ನಾಪೋಕ್ಲು ಮೂಲಕ ತೆರಳಬಹುದು. ಮಡಿಕೇರಿಯಿಂದ ಎಮ್ಮೆಮಾಡು 32 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಬಸ್ ವ್ಯವಸ್ಥೆಯೂ ಇದೆ.

ಇದೀಗ ಈ ಕ್ಷೇತ್ರದಲ್ಲಿ ವಾರ್ಷಿಕ ಮಖಾಂ ಉರೂಸ್ ನಡೆಯುತ್ತಿದ್ದು ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರ ಹರಿದು ಬರಲಿದೆ. ಇಲ್ಲಿಯೇ ಸೂಫಿ ಸಂತರು ತಮ್ಮ ಜೀವಿತಾವಧಿಯ ಕೊನೆಯ ಗಳಿಗೆ ಕಳೆದಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಆ ಸಂತರ ದರ್ಶನ ಭಾಗ್ಯ ಪಡೆದರೆ ಜೀವನ ಪಾವನವಾಗುತ್ತದೆ ಎಂಬುದು ಭಕ್ತರ ನಂಬಿಕೆ.[ಕರ್ನಾಟಕದ ಸಾವಿರ ಮದ್ರಸಾಗಳಲ್ಲಿ ಸಮೀಕ್ಷೆ ಆರಂಭ]

Yemmemadu Dargah is the most sacred for people of Islamic faith in the Kodagu

ಎಮ್ಮೆಮಾಡುವಿನ ಬಗ್ಗೆ ಇತಿಹಾಸದ ಪುಟ ಹೇಳುವುದೇನು?

ಎಮ್ಮೆಮಾಡುವಿನ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಒಂದಷ್ಟು ಪವಾಡಗಳು ಗೋಚರಿಸುತ್ತವೆ. ನೂರಾರು ವರ್ಷಗಳ ಹಿಂದೆ ಊರೂರು ಅಲೆಯುತ್ತಾ ಶಾಂತಿ ಸಂದೇಶ ಸಾರುತ್ತಾ ಸಾಗುತ್ತಿದ್ದ ಸೂಫಿ ಶಹೀದ್ ಸಂತರು ತಮ್ಮ ಜೀವಿತದ ಕೊನೆ ದಿನಗಳಲ್ಲಿ ಕೊಡಗಿನ ಎಮ್ಮೆಮಾಡಿಗೆ ಬಂದಿದ್ದರು.

ಕೊನೆಯ ವಿಶ್ರಾಂತಿಗೆ ಈ ತಾಣವೇ ಸೂಕ್ತವೆಂದು ನಿರ್ಧರಿಸಿದ ಅವರು ಗ್ರಾಮದ ಎಲ್ಲಾ ಜನಾಂಗದವರೊಂದಿಗೆ ಬೆರೆತು ಅವರ ಕಷ್ಟಕಾರ್ಪಣ್ಯಕ್ಕೆ ಸಲಹೆ ನೀಡುತ್ತಾ ಜನತೆಯಲ್ಲಿ ಸೌಹಾರ್ದತೆ ಬೆಳೆಸಿದ್ದರು.[ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೆಚ್ಚಿದ ಕೊಡಗಿನ ಪುಷ್ಪಲೋಕ]

ಸದಾ ದೇವರ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ಜನ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಸೂಫಿ ಶಹೀದ್ ಸಂತರ ಬಗ್ಗೆ ತಿಳಿದ ಮಂದಿ ಅವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದರು. ದಿನಗಳು ಕಳೆಯುತ್ತಿದ್ದಂತೆಯೇ ಅವರಿಗೆ ತಮ್ಮ ಬದುಕಿನ ಅಂತಿಮ ದಿನಗಳ ದರ್ಶನವಾಗಿದೆ.

ಹಾಗಾಗಿ ಅವರು ಎಮ್ಮೆಮಾಡು ಬಳಿಯ 'ಬರಾಕೊಲ್ಲಿ' ಎಂಬಲ್ಲಿ ಹೆಬ್ಬಂಡೆಯ ಮೇಲೆ ಮಲಗಿದ್ದರಂತೆ. ಬಳಲಿದ್ದ ಅವರನ್ನು ಕಂಡ ಹಸುವೊಂದು ಕಟ್ಟಿಹಾಕಿದ ಹಗ್ಗವನ್ನು ತುಂಡರಿಸಿಕೊಂಡು ಬಂದು ಪಕ್ಕದಲ್ಲೇ ಹರಿದು ಹೋಗುತ್ತಿದ್ದ ತೊರೆಯ ನೀರಿನಲ್ಲಿ ತನ್ನ ಕೆಚ್ಚಲನ್ನು ಮುಳುಗಿಸಿಕೊಂಡು ಬಂದು ಮಂಡಿಯೂರಿ ಹಾಲುಣಿಸಿತಂತೆ. ಇದಕ್ಕೆ ಇಂದಿಗೂ ಬಂಡೆಕಲ್ಲಿನ ಮೇಲೆ ಉಳಿದಿರುವ ಕೆಲವು ಕುರುಹುಗಳು ಸಾಕ್ಷಿಯಾಗಿವೆ.[ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ!]

ಸೂಫಿ ಶಹೀದ್ ಸಂತರಿಗೆ ಹಸು ಹಾಲುಣಿಸಿದ ಪವಾಡ ನಡೆದ ದಿನದಿಂದ ಇಲ್ಲಿಯವರೆಗೂ ಎಮ್ಮೆಮಾಡು ದರ್ಗಾ ಹಸುಕರುಗಳಿಗೆ ಉಂಟಾಗುವ ರೋಗ ರುಜಿನ ಇನ್ನಿತರ ಯಾವುದೇ ತೊಂದರೆಗಳಿಗೆ ಪರಿಹಾರ ನೀಡುತ್ತಾ ಬರುತ್ತಿರುವುದು ಗಮನಾರ್ಹವಾಗಿದೆ.

Yemmemadu Dargah is the most sacred for people of Islamic faith in the Kodagu

ಹರಕೆಯನ್ನು ಹೇಗೆ ಒಪ್ಪಿಸುತ್ತಾರೆ?

ಮನೆಯಲ್ಲಿ ಸಾಕಿದ ಹಸುಕರುಗಳಿಗೆ ತೊಂದರೆಗಳಾದಲ್ಲಿ ಎಮ್ಮೆಮಾಡು ದರ್ಗಾಕ್ಕೆ ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷವೂ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ್ದಕ್ಕಾಗಿ ಬೆಳ್ಳಿಯ ಹಸುಕರುವಿನ ಪ್ರತಿಕೃತಿ ಹಾಗೂ ತುಪ್ಪ, ನಗದನ್ನು ಹರಕೆಯ ರೂಪದಲ್ಲಿ ಒಪ್ಪಿಸುತ್ತಾರೆ.[ಅಳಿವಿನಂಚಿನಲ್ಲಿರುವ ಕೊಡಗಿನ 'ಕೆಂಬಟ್ಟಿ' ಜನಾಂಗ ಮರೆಯಾಗದಿರಲಿ]

ಇದುವರೆಗೆ ಕೇವಲ ದನಕರುಗಳ ಸಮಸ್ಯೆಗೆ ಮಾತ್ರವಲ್ಲದೆ, ಮಾನಸಿಕ, ಶಾರೀರಿಕವಾಗಿ ಕೆಲವೊಂದು ತೊಂದರೆಗಳಿಂದ ಬಳಲುತ್ತಿದ್ದವರು ಕೂಡ ಇಲ್ಲಿಗೆ ಭೇಟಿ ನೀಡಿ ಪರಿಹಾರ ಕಂಡುಕೊಂಡ ನಿದರ್ಶನಗಳಿವೆ. ಒಂದು ಕಾಲದಲ್ಲಿ ಕುಗ್ರಾಮವಾದ ಎಮ್ಮೆಮಾಡು ಇಲ್ಲಿನ ಜಾತಿಭೇದವಿಲ್ಲದ ದರ್ಗಾದ ಮಹಿಮೆಯಿಂದಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದು ಧಾರ್ಮಿಕ, ಸಾಮಾಜಿಕ ಮತ್ತು ವಿದ್ಯಾ ಕೇಂದ್ರವಾಗಿ ದಾಪುಗಾಲಿಡುತ್ತಿದೆ.

English summary
Yemmemadu Dargah is the most sacred shrines for people of islamic faith in the Kodagu. This is holy tomb of Hazrath Sufi Shaeed and sayyed Hassan sakaf Halmir. Every year of over 8 days 'URUS' organized here in remembrance of these saints. This is Located just 35 km from Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X