ಯಲಹಂಕ–ಅರಸೀಕೆರೆ ಮೆಮು ರೈಲು ಸಂಚಾರಕ್ಕೆ ವಿ.ಸೋಮಣ್ಣ ಚಾಲನೆ; ತಿಪಟೂರು ಮಂದಿಗೂ ದೊಡ್ಡ ಗುಡ್ನ್ಯೂಸ್
ಬೆಂಗಳೂರು ಮತ್ತು ತುಮಕೂರು-ಹಾಸನ ಜಿಲ್ಲೆಗಳ ನಡುವೆ ನಿತ್ಯ ಸಂಚರಿಸುವ ಸಾವಿರಾರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದೆ. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ತಿಪಟೂರು ರೈಲು ನಿಲ್ದಾಣದಲ್ಲಿ ನೂತನ ಯಲಹಂಕ-ಅರಸೀಕೆರೆ ಮೆಮು (MEMU) ವಿಶೇಷ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಈ ಹೊಸ ಪ್ರಾದೇಶಿಕ ರೈಲು ಸೇವೆಯು ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಬಲ ತುಂಬಲಿದೆ.
ಯಾರಿಗೆಲ್ಲ ಲಾಭ?
ನೂತನ ಮೆಮು ರೈಲು ಸೇವೆಗಳು ಮಂಗಳವಾರದಿಂದಲೇ (ಜು.14) ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿವೆ. ಈ ವೇಗದ ಮತ್ತು ಸುರಕ್ಷಿತ ರೈಲು ಸೇವೆಯಿಂದಾಗಿ ಉಭಯ ನಗರಗಳ ನಡುವೆ ನಿತ್ಯ ಓಡಾಡುವ ನೌಕರರು, ಸಣ್ಣ ವ್ಯಾಪಾರಿಗಳು, ಕೃಷಿಕರು ಹಾಗೂ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಪ್ರಯಾಣದ ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದೆ.

ರೈಲಿನ ವೇಳಾಪಟ್ಟಿ ಹೀಗಿದೆ
ರೈಲು ಸಂಖ್ಯೆ 66505 (ಯಲಹಂಕ ಟು ಅರಸೀಕೆರೆ): ಪ್ರತಿದಿನ ಬೆಳಗ್ಗೆ 06:45ಕ್ಕೆ ಯಲಹಂಕದಿಂದ ಹೊರಡುವ ಈ ರೈಲು, ಹಗಲು 11 ಗಂಟೆಗೆ ಅರಸೀಕೆರೆಯನ್ನು ತಲುಪಲಿದೆ. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಇದು ಸೂಕ್ತ ಸಮಯವಾಗಿದೆ.
ರೈಲು ಸಂಖ್ಯೆ 66506 (ಅರಸೀಕೆರೆ ಟು ಯಲಹಂಕ): ಮರುಪ್ರಯಾಣದ ದಿಕ್ಕಿನಲ್ಲಿ, ಮಧ್ಯಾಹ್ನ 2:10ಕ್ಕೆ ಅರಸೀಕೆರೆಯಿಂದ ಹೊರಡುವ ರೈಲು, ರಾತ್ರಿ 7:15ಕ್ಕೆ ಯಲಹಂಕ ನಿಲ್ದಾಣಕ್ಕೆ ಬಂದು ತಲುಪಲಿದೆ.
₹23.37 ಕೋಟಿ ವೆಚ್ಚದಲ್ಲಿ 'ಅಮೃತ್ ಭಾರತ್' ಹೈಟೆಕ್ ನಿಲ್ದಾಣ
ರೈಲು ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ದೇಶದಾದ್ಯಂತ ರೈಲ್ವೆ ಮೂಲಸೌಕರ್ಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಇದರ ಭಾಗವಾಗಿ ತಿಪಟೂರು ರೈಲು ನಿಲ್ದಾಣವನ್ನು ಸರಿಸುಮಾರು 23.37 ಕೋಟಿ ರೂಪಾಯಿ ವೆಚ್ಚದಲ್ಲಿ 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಅಂತರರಾಷ್ಟ್ರೀಯ ಮಟ್ಟಕ್ಕೆ ನವೀಕರಿಸಲಾಗುತ್ತಿದೆ ಎಂದರು.
ಇದರಲ್ಲಿ ದೇಸಿ ಶೈಲಿಯ ನಿಲ್ದಾಣದ ಪ್ರಧಾನ ಕಟ್ಟಡ ವಿಸ್ತರಣೆ ಮತ್ತು ಅತ್ಯಾಧುನಿಕ ವೇಟಿಂಗ್ ರೂಮ್ಗಳು, ಹೊಸ ಪ್ಲಾಟ್ಫಾರ್ಮ್ ಶೆಲ್ಟರ್ಗಳು ಮತ್ತು ಆಧುನಿಕ ಶೌಚಾಲಯ ಸಂಕೀರ್ಣ, ಪ್ರಯಾಣಿಕರ ಸುಲಭ ಓಡಾಟಕ್ಕಾಗಿ 3 ಲಿಫ್ಟ್ಗಳು ಮತ್ತು 2 ಎಸ್ಕಲೇಟರ್ಗಳನ್ನೊಳಗೊಂಡ 12 ಮೀಟರ್ ಅಗಲದ ಬೃಹತ್ ಪಾದಚಾರಿ ಮೇಲ್ಸೇತುವೆ, ಸುಂದರವಾದ ಲ್ಯಾಂಡ್ಸ್ಕೇಪಿಂಗ್, ಎಲ್ಇಡಿ ದೀಪಗಳ ವ್ಯವಸ್ಥೆ ಹಾಗೂ ವಿಸ್ತಾರವಾದ ವೆಹಿಕಲ್ ಪಾರ್ಕಿಂಗ್ ಸೌಲಭ್ಯ ಇರಲಿದೆ.
₹119 ಕೋಟಿ ವೆಚ್ಚದಲ್ಲಿ 2 ಬೃಹತ್ ರಸ್ತೆ ಮೇಲ್ಸೇತುವೆ
ತಿಪಟೂರು ಭಾಗದಲ್ಲಿ ರೈಲ್ವೆ ಗೇಟ್ಗಳಿಂದಾಗಿ ವಾಹನ ಸವಾರರು ಎದುರಿಸುತ್ತಿದ್ದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಎರಡು ಬೃಹತ್ ರಸ್ತೆ ಮೇಲ್ಸೇತುವೆ (ಆರ್ಒಬಿ) ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದೂ ಸೋಮಣ್ಣ ಮಾಹಿತಿ ನೀಡಿದರು. ಶಾರದಾನಗರ ಹಾಲ್ಟ್ (ಗೇಟ್ ನಂ. 86) ಇಲ್ಲಿ ₹89.32 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು, ಇದರಿಂದ ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಹಾಸನ ನಡುವಿನ ವಾಹನ ಸಂಚಾರ ಸುಗಮವಾಗಲಿದೆ.
ಹೊನ್ನಾವಳ್ಳಿಯಲ್ಲಿ ₹29.74 ಕೋಟಿ ವೆಚ್ಚದಲ್ಲಿ ಹೊಸ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇದು ತಿಪಟೂರು, ಹೊನ್ನಾವಳ್ಳಿ ಮತ್ತು ಕೊನೇಹಳ್ಳಿ ಸಂಪರ್ಕವನ್ನು ಬಲಪಡಿಸಲಿದೆ. ಈ ಎರಡೂ ಯೋಜನೆಗಳಿಂದಾಗಿ ಲೆವೆಲ್ ಕ್ರಾಸಿಂಗ್ಗಳಲ್ಲಿ ವಾಹನಗಳು ಕಾಯುವ ಸಮಯ ಸಂಪೂರ್ಣವಾಗಿ ಕಡಿಮೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ತಿಪಟೂರು ಕ್ಷೇತ್ರದ ಶಾಸಕರಾದ ಕೆ.ಶಡಾಕ್ಷರಿ, ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (ADRM) ಶಮ್ಮಾಸ್ ಹಮೀದ್ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications