ಸಿದ್ದರಾಮಯ್ಯ ಬಳಿಕ ಕಾಂಗ್ರೆಸ್ ನಾಯಕತ್ವ: ಯತೀಂದ್ರ ಮಾತಿಗೆ ಸತೀಶ್ ಜಾರಕಿಹೊಳಿ ಏನಂದ್ರು?
ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಅಭ್ಯರ್ಥಿಯಾಗಲು ಸತೀಶ್ ಜಾರಕಿಹೊಳಿ ಸಮರ್ಥರು ಎಂದು ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ನೀಡಿರುವ ಸುಳಿವು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ತಂದೆ ಸಿದ್ದರಾಮಯ್ಯ ಅವರ ಬಳಿಕ ನಾಯಕತ್ವ ವಹಿಸಿಕೊಳ್ಳಲು ಸತೀಶ್ ಜಾರಕಿಹೊಳಿ ಅವರು ಸೂಕ್ತ ಎಂದು ಯತೀಂದ್ರ ಹೇಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಿಎಂ ಆಕಾಂಕ್ಷಿಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಈ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಕೂಡ ತಮ್ಮದೇ ಶೈಲಿಯಲ್ಲಿ ಯತೀಂದ್ರ ಮಾತಿಗೆ ತಿರುಗೇಟು ನೀಡಿದ್ದಾರೆ. ಇನ್ನು ಮುಂದಿನ ಸಿಎಂ ವಿಚಾರವಾಗಿ ಸತೀಶ್ ಜಾರಕಿಹೊಳಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಈ ಹಿಂದೆ ಹಲವು ಬಾರಿ ಸತೀಶ್ ಅವರ ಹೆಸರು ಕೇಳಿಬಂದಿದೆ. ಡಿಕೆ ಶಿವಕುಮಾರ್ ಅವರ ಬಳಿಕ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಅಂದ್ರೆ ಅದು ಸತೀಶ್ ಜಾರಕಿಹೊಳಿ ಎನ್ನುವ ಮಾತೂ ಇದೆ. ಈಗ ಸಿಎಂ ಪುತ್ರ ಯತೀಂದ್ರ ಅವರೇ ಸತೀಶ್ ಅವರ ಹೆಸರನ್ನು ತುಂಬು ವೇದಿಕೆಯಲ್ಲಿ ಸೂಚಿಸಿರುವುದರಿಂದ ಸಿದ್ದರಾಮಯ್ಯ ಅವರ ಬಣವು ಸತೀಶ್ ಜಾರಕಿಹೊಳಿ ಅವರನ್ನೇ ಮುಂದಿನ ಸಿಎಂ ಎಂದು ಆಯ್ಕೆ ಮಾಡಿರುವ ಸಂದೇಶ ರವಾನೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾತನಾಡಿರುವ ಸತೀಶ್ ಜಾರಕಿಹೊಳಿ, 'ಯತೀಂದ್ರ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ಹೇಳಬೇಕು. ಅಂತಿಮವಾಗಿ ಪಕ್ಷ, ಶಾಸಕರು ಈ ಬಗ್ಗೆ ತೀರ್ಮಾನ ಮಾಡಬೇಕು. ಅದಕ್ಕೆ ಇನ್ನೂ ಬಹಳ ಸಮಯ ಇದೆ. ಕಾದು ನೋಡೋಣ' ಎಂದಿದ್ದಾರೆ.
'ನಾನು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಹೇಳಲ್ಲ. ಅದನ್ನು ಜನ ಹಾಗೂ ಪಕ್ಷ ಹೇಳಬೇಕು. ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರಷ್ಟೇ. ಕಾಂಗ್ರೆಸ್‌ನಲ್ಲಿ ಅರಸು ನಂತರ ಬಂಗಾರಪ್ಪ, ಬಳಿಕ ಸಿದ್ದರಾಮಯ್ಯ. ಅವರ ಬಳಿಕ ಯಾರು ಎನ್ನುವ ಪ್ರಶ್ನೆಗೆ ಮುಂದೆ ಉತ್ತರ ಸಿಗುತ್ತೆ. 2028ರ ಸಿಎಂ ರೇಸ್‌ನಲ್ಲಿ ನಾನೂ ಇದ್ದೇನೆ' ಎಂದು ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಿಎಂ ಬಣಕ್ಕೆ ಡಿಕೆಶಿ ಚೆಕ್‌ಮೇಟ್
ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಕೂಡ ವ್ಯಂಗ್ಯವಾಡಿದೆ. 'ನವೆಂಬರ್ ಕ್ರಾಂತಿಯ ಸುಳಿವನ್ನು ಡಾ.ಯತೀಂದ್ರ ಅವರು ಬಿಟ್ಟು ಕೊಡುತ್ತಿದ್ದಂತೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮಾಯಣದ ಕತೆ ಮೂಲಕ ಸಿಎಂ ಬಣಕ್ಕೆ ಚೆಕ್‌ಮೇಟ್ ನೀಡಿದ್ದಾರೆ ಎಂದು ಹೇಳಿದೆ. ಡಿಕೆಶಿ ಅವರೇ, ಸಮಾಜದಲ್ಲಿ ದಶರಥನ ಗುಡಿ ಕಟ್ಟುವುದಿಲ್ಲ ಅಂದ್ರೆ, ದಲಿತ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ಯಾವುದೇ ಕಾರಣಕ್ಕೂ ಕುರ್ಚಿ ಹತ್ತಲು ಬಿಡುವುದಿಲ್ಲ ಅಂತ ಅಲ್ಲವೇ ತಾವು ಹೇಳಿದ್ದು? ಹಾಗೇ ಸೇವಕನೆಂಬ ಭ್ರಮೆಯಲ್ಲಿ ತೇಲುತ್ತಿರುವ ತಮಗೆ ಕನಸಿನ ಕಿರೀಟವನ್ನು ಧರಿಸುವುದಕ್ಕೆ ಸಿದ್ದರಾಮಯ್ಯನವರು ಬಿಡುತ್ತಾರೋ?' ಎಂದು ಪ್ರಶ್ನಿಸಿದೆ.












Click it and Unblock the Notifications