ಯಾದಗಿರಿ ಜಿಲ್ಲೆಯ ಗುರುವಾರದ ಸುದ್ದಿಗಳ ಗುಚ್ಛ
ಯಾದಗಿರಿ, ಸೆಪ್ಟೆಂಬರ್ 28 : ಸುರುಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಬಯಲು ಶೌಚಾಲಯಕ್ಕೆ ತೆರಳುತ್ತಿದ್ದ ಗ್ರಾಮಸ್ಥರಿಗೆ ಗುಲಾಬಿ ಹೂ ನೀಡುವ ಮೂಲಕ ವಿಶಿಷ್ಟವಾಗಿ ಜಾಗೃತಿ ಮೂಡಿಸಲಾಯಿತು.
ನಗನೂರು ಗ್ರಾಮದ ವಿವಿಧ ಬೀದಿಗಳಲ್ಲಿ ಸುತ್ತಾಡಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಇರುವ ಸಹಾಯಧನ ಕುರಿತು ಮಾಹಿತಿ ನೀಡಲಾಯಿತು. ನಗನೂರು ಗ್ರಾಮ ಪಂಚಾಯತಿಯನ್ನು ಬಯಲು ಶೌಚಮುಕ್ತವಾಗಿ ಮಾಡಲು ಪಣ ತೊಡಲಾಯಿತು.

ಡಿಡಿಪಿಐ ಬಸವರಾಜ ಗವನಹಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನಿಲ್ ಕಾಂಬ್ಳೆ, ನಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ್ ಚನ್ನೂರು ಸೇರಿದಂತೆ ವಿವಿಧ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆಗೊಳಡಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹದಿನೈದು ದಿನಗಳ ಹಿಂದೆ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ : ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಬ್ಬರನ್ನು ಅಮಾನತುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಳೆದ 20 ವರ್ಷಗಳಿಂದ ದಂಪತಿಗಳಾದ ಮುಖ್ಯಗುರು ನೀಲಮ್ಮ ನಾಗರಬೆಟ್ಟ ಹಾಗೂ ದೈಹಿಕ ವಿರೇಶ ಅಂಗಡಿ ಕಕ್ಕೇರಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಯಾವುದೇ ರಸೀದಿ ಇಲ್ಲದೇ ಹೆಚ್ಚುವರಿ ಪ್ರವೇಶ ಶುಲ್ಕ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ವಿಜ್ಞಾನ ಮೇಳ, ವಸ್ತು ಪ್ರದರ್ಶನ : ನಗರದ ಲಿಂಗೇರಿ ಕೋನಪ್ಪ ಎಜುಕೇಷನ್ ಟ್ರಸ್ಟ್ ನಿಂದ ವಿಜ್ಞಾನ ಮೇಳ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾದ ಡಾ.ಎಸ್. ಕೆ.ಶಿವಕುಮಾರ್ ಮೇಳಕ್ಕೆ ಚಾಲನೆ ನೀಡಿದರು.
ಮೇಳದಲ್ಲಿ ತಂತ್ರಜ್ಞಾನದ ಬೆಳವಣಿಗೆ ಹಾಗೂ ಮೂಢನಂಬಿಕೆ ಹೋಗಲಾಡಿಸುವ ಕುರಿತು ಅತಿಥಿಗಳು ಉಪನ್ಯಾಸ ನೀಡಿದರು. ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ತಯಾರಿಸಿದ್ದ ಮಾದರಿಗಳ ಪ್ರದರ್ಶನ ನಡೆಯಿತು.












Click it and Unblock the Notifications