ಹೊಸ ಇತಿಹಾಸ ನಿರ್ಮಿಸಿದ ಕಾಗೋಡು ತಿಮ್ಮಪ್ಪ
ಶಿವಮೊಗ್ಗ, ಏಪ್ರಿಲ್ 25: ಕರ್ನಾಟಕದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. 13ನೇ ಬಾರಿಗೆ ನಾಮಪತ್ರ ಸಲ್ಲಿಸುತ್ತಿರುವ ತಿಮ್ಮಪ್ಪ ಅವರು 1980ರಲ್ಲಿ ಪರಿಷತ್ ಚುನಾವಣೆಗೂ ನಾಮಪತ್ರ ಸಲ್ಲಿಸಿದ್ದರು.
ಸೋಮವಾರದಂದು ಕಾಗೋಡು ತಿಮ್ಮಪ್ಪ ಅವರು, ಅಳಿಯ ಬೇಳೂರು ಗೋಪಾಲಕೃಷ್ಣ ಅವರ ಜತೆಗೂಡಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಸ್ವಾತಂತ್ರ್ಯ ನಂತರ 1952 ರಿಂದ 2013ರ ತನಕ 14 ಬಾರಿ ಚುನಾವಣೆಗಳನ್ನು ನಮ್ಮ ನಾಡು ಕಂಡಿದ್ದು, 2018ರ ಚುನಾವಣೆ 15ನೇ ವಿಧಾನಸಭೆಗೆ ಶಾಸಕರನ್ನು ಆಯ್ಕೆ ಮಾಡಲು ಪ್ರಜಾತಂತ್ರ ನೀಡಿರುವ ವ್ಯವಸ್ಥೆಯಾಗಿದೆ.

1962ರಲ್ಲಿ ಮೊದಲ ಬಾರಿಗೆ ತಿಮ್ಮಪ್ಪ ಅವರು ಚುನಾವಣೆ ಎದುರಿಸಿದರು. ಸಾಗರ ಕ್ಷೇತ್ರದಿಂದ ಮೊದಲ ಯತ್ನದಲ್ಲೇ ಸೋಲು ಕಂಡಿದ್ದರು. 1967ರಲ್ಲೂ ತಿಮ್ಮಪ್ಪ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲ.
1972ರಲ್ಲಿ ಕಾಂಗ್ರೆಸ್ಸಿನ ಎಲ್. ಟಿ ತಿಮ್ಮಪ್ಪ ಹೆಗ್ಡೆ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಮೊದಲ ಗೆಲುವು ಸಾಧಿಸಿದ್ದು ಸೋಷಿಯಲಿಸ್ಟ್ ಪಾರ್ಟಿ ಮೂಲಕ ಎಂಬುದು ವಿಶೇಷ. ಆದರೆ, ನಂತರ 1978ರಲ್ಲಿ ಸೋಲು ಕಂಡು ಅಚ್ಚರಿ ಮೂಡಿಸಿದರು.
ನಂತರ ಕಾಂಗ್ರೆಸ್ ಪಕ್ಷ ಸೇರಿದ ತಿಮ್ಮಪ್ಪ ಅವರು 1980ರಲ್ಲಿ ವಿಧಾನಪರಿಷತ್ ಸದಸ್ಯರಾದರು. ಹೀಗೆ, ಅಂದಿನಿಂದ ಚುನಾವಣೆಗಳನ್ನು ಎದುರಿಸುತ್ತಾ ಬರುತ್ತಿರುವ ತಿಮ್ಮಪ್ಪ ಅವರಿಗೆ ಈಗ 85 ವರ್ಷ ವಯಸ್ಸು. ಕರ್ನಾಟಕದ ಹಿರಿಯ ಸಕ್ರಿಯ ರಾಜಕಾರಣಿ.












Click it and Unblock the Notifications