ಚುನಾವಣೆ ಹೊತ್ತಲ್ಲಿ ಕುಮಾರಸ್ವಾಮಿಗೆ ಆರೋಗ್ಯ ಸಮಸ್ಯೆ: ಜೆಡಿಎಸ್‌ಗೆ ಅನುಕೂಲವೋ, ತಿರುಗುಬಾಣವೋ?
ಬೆಂಗಳೂರು, ಏಪ್ರಿಲ್. 25: ಇದು ಚುನಾವಣಾ ಸಮಯ. ಯಾವುದೇ ವಿಷಯವಿದ್ದರೂ ಅದನ್ನು ಚುನಾವಣೆ ಜೊತೆಗೆ ನಂಟು ಹಾಕುವ ಲೆಕ್ಕಾಚಾರವೇ ಮುಖ್ಯವಾಗುತ್ತದೆ. ಅದರಲ್ಲೂ ರಾಜಕಾರಣಿಗಳ ಪ್ರವಾಸ, ದಿನಚರಿ, ಆರೋಗ್ಯ ಸಮಸ್ಯೆಗಳು ರಾಜಕೀಯ ವಿಷಯವಾಗುವುದರಲ್ಲಿ ಎರಡು ಮಾತಿಲ್ಲ. ಈಗ ಎಲೆಕ್ಷನ್ ಕಣದಲ್ಲಿ ಹರಿದಾಡುತ್ತಿರುವುದು ಕೂಡ ಇಂತಹದ್ದೇ ಒಂದು ವಿಚಾರ.
ಹೌದು... ಸದ್ಯಕ್ಕೆ ರಾಜ್ಯ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಸಮಸ್ಯೆಗಳದ್ದೇ ಸುದ್ದಿ. ಇದೊಂದು ಭಾವನಾತ್ಮಕ ಮತ್ತು ವೈಯಕ್ತಿಕ ವಿಷಯವಾಗಿದ್ದರೂ ಕೂಡ ರಾಜಕಾರಣಿಯೊಬ್ಬರ ಬದುಕು ವೈಯಕ್ತಿಕವಾಗಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ. ಇದೇ ಕಾರಣಕ್ಕೆ ಅವರ ಆರೋಗ್ಯ ಸಮಸ್ಯೆಗೂ ಮುಂಬರುವ ಚುನಾವಣೆಗೂ ಲಿಂಕ್ ಮಾಡಲಾಗುತ್ತದೆ.

ಜೆಡಿಎಸ್ ಕಳೆದ ಮೂರು ಚುನಾವಣೆಗಳಲ್ಲೂ ಕಿಂಗ್ ಮೇಕರ್ ಆಗಿ ತನ್ನ ಆಟವಾಡಿದೆ. ಆದರೆ, ಈ ಬಾರಿ ಬಹುಮತದ ಸ್ಥಾನಗಳನ್ನು ಗೆದ್ದು, ಸರ್ಕಾರ ರಚನೆ ಮಾಡೇ ಮಾಡುತ್ತೇವೆ ಎಂಬ ವಿಶ್ವಾಸದಲ್ಲಿರುವ ಜೆಡಿಎಸ್ ನಾಯಕ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದೇ ಮಾತನ್ನು ಇಟ್ಟುಕೊಂಡು ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆಯನ್ನು ಮಾಡಿದ್ದಾರೆ. ಈ ನಡುವೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.
ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಈ ಸಮಯದಲ್ಲಿ ಮತ್ತೆ ಕಳೆದೆರಡು ದಿನಗಳ ಹಿಂದಷ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಆದಿಚುಂಚನಗಿರಿ ಮಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದು ಕೂಡ ರಾಜ್ಯ ರಾಜಕೀಯದಲ್ಲಿ ಹಲವು ಹೊಸ ಹೊಳಹುಗಳಿಗೆ ಸಾಕ್ಷಿಯಾಗಿತ್ತು.
ಒಕ್ಕಲಿಗರ ಪ್ರಮುಖ ಮತಗಳನ್ನು ಪಡೆಯುವ ಜೆಡಿಎಸ್ ಪಕ್ಷದ ನಾಯಕ ಈ ಬಾರಿ ತನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ನನ್ನ ಆರೋಗ್ಯ ಸರಿಯಿಲ್ಲ ಎಂದು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಒತ್ತಿ ಒತ್ತಿ ಹೇಳಿದ್ದಾರೆ. ಇದಲ್ಲದೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆರೋಗ್ಯ ಸಮಸ್ಯೆಯನ್ನು ಪ್ರಸ್ತಾಪಿಸಿ, ಈ ಬಾರಿ ತಮಗೆ ಅವಕಾಶ ನೀಡುವಂತೆ ಕರುನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ. ಹಾಗಾದರೇ, ಕುಮಾರಣ್ಣ ಅವರ ಆರೋಗ್ಯ ಸಮಸ್ಯೆಗಳು ಚುನಾವಣೆಯಲ್ಲಿ ಜೆಡಿಎಸ್‌ಗೆ ಲಾಭವಾಗಲಿದೆಯೋ ಇಲ್ಲ ಅದೇ ತಿರುಗುಬಾಣವಾಗಲಿದೆಯೋ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

*ಎಚ್‌ಡಿ ಕುಮಾರಸ್ವಾಮಿ ಆರೋಗ್ಯ ಸಮಸ್ಯೆಯಿಂದ ಜೆಡಿಎಸ್‌ಗಾಗುವ ಲಾಭವೇನು?*
*ಆರೋಗ್ಯ ಸಮಸ್ಯೆಯೇ ಪ್ಲಸ್ ಪಾಯಿಂಟ್*: ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಸಮಸ್ಯೆಯೇ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಅನಾರೋಗ್ಯ ಎಂಬುದು ಮತದಾರರಲ್ಲಿ ಸಹಾನುಭೂತಿ ಮೂಡಿಸುವ ಒಂದು ಪ್ರಮುಖ ಅಂಶವಾಗಿ ಕೆಲಸ ಮಾಡುತ್ತದೆ. ಇದು ಹಲವು ಬಾರಿ ಕೆಲಸ ಮಾಡಿದೆ. ಇದನ್ನು ಇಟ್ಟುಕೊಂಡೆ ಪಂಚರತ್ನ ರಥಯಾತ್ರೆ ಆರಂಭ ಮಾಡಿದಾಗಿನಿಂದ ಅಂದರೆ, ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಕುಮಾರಸ್ವಾಮಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ಅವರು ತಾವು ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಜನರು ಕೂಡ ಹೆಚ್ಚು ಕನಿಕರ ವ್ಯಕ್ತಪಡಿಸಿದ್ದರು.
*ಅನಾರೋಗ್ಯದ ನಡುವೆ ರಾಜ್ಯ ಪ್ರವಾಸ*: ಅನಾರೋಗ್ಯದ ನಡುವೆ ರಾಜ್ಯ ಪ್ರವಾಸ ಮಾಡಿದ್ದ ಎಚ್.ಡಿ ಕುಮಾರಸ್ವಾಮಿ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಒಲವು ವ್ಯಕ್ತವಾಗಿತ್ತು. ತಮ್ಮ ನಾಯಕ ಅನಾರೋಗ್ಯದ ನಡುವೆ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಡುತ್ತಿರುವ ಪ್ರಯತ್ನದ ಬಗ್ಗೆ ಕಾರ್ಯಕರ್ತರು ಹುರುಪಿನಿಂದ ಮಾತನಾಡಿದ್ದರು. ಜೊತೆಗೆ ಇದು ಜನರ ಮೇಲೂ ಪ್ರಭಾವ ಬೀರಿತ್ತು. ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗಿಂತ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಜನರನ್ನು ಹೆಚ್ಚು ತಲುಪಿದೆ ಎಂದು 'ಸೌತ್ ಫಸ್ಟ್' ನಡೆಸಿದ ಸಮೀಕ್ಷೆ ಬಹಿರಂಗಪಡಿಸಿತ್ತು.
* ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪ್ರವಾಸ*: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕೂಡ ಮಗನ ಅನಾರೋಗ್ಯದ ಹಿನ್ನೆಲೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇದು ಕೂಡ ಜೆಡಿಎಸ್‌ಗೆ ಭಾರಿ ಲಾಭ ತಂದುಕೊಡುತ್ತದೆ ಎನ್ನಲಾಗುತ್ತಿದೆ. ಈಗಾಗಲೇ ಪಂಚರತ್ನ ರಥ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದೇವೇಗೌಡರು ಭಾಗವಹಿಸಿ ಮಗನನ್ನು ಸಿಎಂ ಮಾಡುವಂತೆ ಮತ ಯಾಚಿಸಿದ್ದರು.

*ಕೊನೆಯ ಅವಕಾಶ*: ಎಚ್.ಡಿ ಕುಮಾರಸ್ವಾಮಿ ಪದೇ ಪದೇ ಮತದಾರರಲ್ಲಿ ಕೇಳುತ್ತಿರುವುದು ಒಂದು ಅವಕಾಶ ಕೊಡಿ ಎಂದು. ಇದು ಕೂಡ ಜನರ ಮೇಲೆ ಪರಿಣಾಮ ಬೀರಬಹುದು. ಏಕೆಂದರೇ ಕೊನೆಯ ಅವಕಾಶ ಎಂಬುದು ಜನರಲ್ಲಿ ಭಾವನಾತ್ಮಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಅನಾರೋಗ್ಯದ ಕಾರಣದಿಂದ ಇದು ಕೊನೆಯ ಚುನಾವಣೆ, ನನಗೆ ಕೊನೆಯ ಅವಕಾಶ ನೀಡಿ ಎಂದು ಎಚ್‌ಡಿಕೆ ಮನವಿ ಮಾಡಿದ್ದಾರೆ.
*ವಿಶ್ರಾಂತಿ ಬೇಡ, ಪ್ರಚಾರ ಮಾಡುತ್ತೇನೆ*: ಈಗಾಗಲೇ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎಂದು ಫಲಿತಾಂಶ ನೀಡಿವೆ. ಮಾಜಿ ಸಿಎಂ ಕೂಡ 'ನನಗೆ ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಆದರೆ ನನಗೆ ವಿಶ್ರಾಂತಿ ಪಡೆಯಲು ಸಮಯವಿಲ್ಲ. ನಾನು ಪ್ರಚಾರ, ಸಭೆಗಳನ್ನು ನಡೆಸಬೇಕಿದೆ' ಎಂದಿರುವುದು ಜನರನ್ನು ಜೆಡಿಎಸ್ ಕಡೆ ಸೆಳೆಯಲು ಕಾರಣವಾಗಬಹುದು.
*ಎಚ್‌ಡಿ ಕುಮಾರಸ್ವಾಮಿ ಆರೋಗ್ಯ ಸಮಸ್ಯೆ ಜೆಡಿಎಸ್‌ಗೆ ತಿರುಗುಬಾಣವಾಗಬಹುದೇ?*
*ಜನರಲ್ಲಿ ನೆಗೆಟಿವ್ ಇಮೇಜ್*: ಪದೇ ಪದೇ ಅನಾರೋಗ್ಯದ ಸಮಸ್ಯೆಯನ್ನು ಹೇಳುತ್ತಿದ್ದರೇ ಜನರಲ್ಲಿ ಬೇರೆ ರೀತಿಯ ಇಮೇಜ್ ಸೃಷ್ಟಿಯಾಗುತ್ತದೆ. ಪಕ್ಷದ ಬಗ್ಗೆ ಭರವಸೆ ಇರುವವರು ಕೂಡ ಇವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಬರೀ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಎನ್ನಿಸಿಬಿಡುವ ಸಂಭವವಿದೆ. ತಮ್ಮದೇ ಆರೋಗ್ಯ ಸಮಸ್ಯೆಯಿಂದ ಹೊರಬರಲಾಗದವರು ಜನರ ಸಮಸ್ಯೆಗಳಿಗೆ ಏನು ಪರಿಹಾರ ನೀಡಬಹುದು ಎಂಬ ಪ್ರಶ್ನೆ ಜನರಲ್ಲಿ ಬಂದರೇ ಅದು ಜೆಡಿಎಸ್‌ಗೆ ದೊಡ್ಡ ಪೆಟ್ಟು ನೀಡಲಿದೆ.
*ಇಳಿವಯಸ್ಸಿನಲ್ಲಿ ದೇವೇಗೌಡರ ಪ್ರವಾಸ*: ಪ್ರವಾಸ, ಪ್ರಚಾರದಿಂದ ದೂರವಿರಬೇಕು ಎಂಬ ವೈದ್ಯರ ಸಲಹೆ ಮೀರಿಯೂ ಪದೇ ಪದೇ ದೇವೇಗೌಡರನ್ನು ಚುನಾವಣಾ ಪ್ರಚಾರಗಳಿಗೆ ಕರೆಸಿಕೊಳ್ಳುವುದು ಕೂಡ ಜೆಡಿಎಸ್‌ಗೆ ತಿರುಗುಬಾಣವಾಗಬಹುದು. ಏಕೆಂದರೆ ಈ ಇಳಿ ವಯಸ್ಸಿನಲ್ಲಿಯೂ ಅಧಿಕಾರದ ಆಸೆ, ಮಗನ ಮೇಲಿನ ವ್ಯಾಮೋಹ ಜನರ ಕಣ್ಣಿಗೆ ಬೀಳದೆ ಇರದು. ದೇವೇಗೌಡರನ್ನು ರಾಜಕೀಯ ದಾಳವಾಗಿ ಎಚ್.ಡಿ.ಕುಮಾರಸ್ವಾಮಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಬರಬಹುದು.
*ಬೂಟಾಟಿಕೆ ಆರೋಪ*: ಹೇಳಿದ್ದನ್ನೇ ಹೇಳಿದರೇ ಜನರು ಸ್ಪಲ್ಪ ದಿನ ಮಾತ್ರ ಸಹಿಸಿಕೊಳ್ಳಬಹುದು. ಪ್ರತಿದಿನ ಇದೇ ಆದರೆ ಯಾರು ಅದಕ್ಕೆ ಕಿವಿಕೊಡುವುದಿಲ್ಲ. ಅದು ಬೂಟಾಟಿಕೆ ಎಂದು ಬಿಟ್ಟು ಬಿಡುತ್ತಾರೆ. ಮೊದಲೇ ಹೇಳಿದಂತೆ ಪಂಚರತ್ನ ರಥಯಾತ್ರೆ ಆರಂಭದಿಂದಲೇ ತನ್ನ ಆರೋಗ್ಯದ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಹೇಳುತ್ತಲೇ ಇದ್ದಾರೆ. ಕೇಳಿ ಕೇಳಿ ಜನ ಕೂಡ ದಿನ ಸಾಯುವವರಿಗೆ ಅಳುವವರು ಯಾರು..? ಎಂಬ ಸ್ಥಿತಿಗೆ ಬಂದರೇ ಜೆಡಿಎಸ್‌ಗೆ ಬರುವ ಮತಗಳು ಬರದಿರಬಹುದು.
*ಕುಮಾರಣ್ಣನ ಕಣ್ಣೀರು*: ಕುಮಾರಸ್ವಾಮಿ ಸಾರ್ವಜನಿಕರವಾಗಿ ಅದೇಷ್ಟು ಬಾರಿ ಕಣ್ಣೀರು ಹಾಕಿಲ್ಲ. ಇಂದಿಗೂ ಪ್ರತಿಪಕ್ಷಗಳು, ಟ್ರೋಲ್ ಪೇಜ್‌ಗಳು ಕುಮಾರಣ್ಣನ ಕಣ್ಣೀರು, ವಿಕ್ಸ್ ಹಚ್ಚಿಕೊಂಡು ಅಳುತ್ತಾರೆ ಎಂದು ಟ್ರೋಲ್ ಮಾಡುತ್ತಲೇ ಇರುತ್ತವೆ. ಹೀಗಾಗಿ ತಮ್ಮ ಅನಾರೋಗ್ಯದ ವಿಷಯವನ್ನು ಚುನಾವಣಾ ಪ್ರಚಾರಗಳಿಂದ ದೂರವಿಟ್ಟಷ್ಟು ಜೆಡಿಎಸ್‌ಗೆ ಲಾಭ. ಇಲ್ಲದಿದ್ದರೇ ಇಷ್ಟು ದಿನಗಳ ಶ್ರಮವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತೆ ಆಗಲಿದೆ.












Click it and Unblock the Notifications