Menstrual Leave: ಇನ್ಮುಂದೆ ವಿದ್ಯಾರ್ಥಿನಿಯರಿಗೂ ಸಿಗಲಿದೆಯಾ ಋತುಚಕ್ರ ರಜೆ?
ಬೆಂಗಳೂರು: ಕರ್ನಾಟಕದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ. ಇತ್ತೀಚೆಗೆ, ಶಿಕ್ಷಕಿಯರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗಿದೆ. ವಿದ್ಯಾರ್ಥಿನಿಯರು ಕೂಡ ರಜೆಗಾಗಿ ಒತ್ತಾಯಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಸ್ತಾವನೆಗಳು ಬಂದಿವೆ, ಆದರೆ ಅಂತಿಮ ನಿರ್ಧಾರಕ್ಕಾಗಿ ಕಾಯಬೇಕಾಗಿದೆ.
ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನ ಅಂತಿಮ. ಈ ಬಗ್ಗೆ ಸದ್ಯದವರೆಗೆ ನಮ್ಮ ಇಲಾಖೆಗಳಿಗೆ ಯಾವುದೇ ಸೂಚನೆ ಬಂದಿಲ್ಲ. ಬಂದರೆ ಜಾರಿಗೊಳಿಸಲಾಗುವುದು ಎಂದುಹೇಳಿದರು.

ಋತುಚಕ್ರ ರಜೆ ನೀಡುವ ಬಗ್ಗೆ ಸೂಚನೆ ಬಂದರೆ ಬೋರ್ಡ್ ಪರೀಕ್ಷೆ ಬರೆಯಲು ಶೇ.75 ಹಾಜರಾತಿ ಕಡ್ಡಾಯ ನಿಯಮದ ಒಳಗೆ ಈ ರಜೆಯನ್ನು ತರಬೇಕೇ, ಬೇಡವೇ ಎಂಬ ಬಗ್ಗೆ ಚರ್ಚಿಸಬೇಕಾಗುತ್ತದೆ. ಹಾಗೆಯೇ ಸೆಮಿಸ್ಟರ್ ಒಂದಕ್ಕೆ 90 ದಿನಗಳ ತರಗತಿ ನಡೆಯುವುದು ಕಡ್ಡಾಯ ಎಂಬ ನಿಯಮವಿದೆ. ಇದೆಲ್ಲವನ್ನು ಪರಿಶೀಲಿಸಿ ನಿರ್ಧರಿಸಬೇಕಾಗುತ್ತದೆ. ಸದ್ಯದ ವರೆಗೆ ಸರ್ಕಾರದಿಂದ ಇಲಾಖೆಗಳಿಗೆ ಯಾವುದೇ ಮಾಹಿತಿ ಬಂದಿಲ್ಲ. ಬಂದ ಬಳಿಕ ಎಲ್ಲವನ್ನೂ ಪರಿಶಿಲಿಸಲಾಗುವುದು ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಇನ್ನೂ ಈ ಕುರಿತು ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಮಾತನಾಡಿ, ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಋತುಚಕ್ರ ರಜೆ ನೀಡಲು ಸಿಎಂ ಸೂಚನೆ ನೀಡಿದ್ರೆ ರಜೆ ಘೋಷಣೆ ಮಾಡಲಾಗುತ್ತದೆ. ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ರಜೆ ಕೊಡಬೇಕು ಅಂದರೆ ಕೊಡ್ತೀವಿ. ಸಿಎಂ ಅವರು ಈ ಬಗ್ಗೆ ಹೇಳಿದ್ರೆ ಅದೇ ಅಂತಿಮ. ಕಾಲೇಜು ವಿದ್ಯಾರ್ಥಿನಿಯಯರು, ವಿವಿ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ಕೊಡೋ ಬಗ್ಗೆ ಸಿಎಂ ಅವರು ಸೂಚನೆ ಕೊಟ್ಟರೆ ಮಾಡ್ತೀವಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶವೇ ಅಂತಿಮ ಎಂದು ಹೇಳಿದರು.
ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆಗೆ ಶಿಫಾರಸು
ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯ ಸೌಲಭ್ಯ ಕಲ್ಪಿಸಿದ ನೀತಿಯನ್ನು ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಶೀಘ್ರ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳ ಭರವಸೆ ನೀಡಿದರು. ವಿದ್ಯಾರ್ಥಿನಿಯರು ಮುಟ್ಟಿನ ರಜೆಯ ಸೌಲಭ್ಯ ಕೇಳಿದ್ದು ಸ್ವಾಗತಾರ್ಹ. ಉತ್ತಮ ವಿಚಾರವನ್ನು ಬಾಲಕಿ ಮುಂದಿಟ್ಟಿದ್ದಾಳೆ. ಇದು ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕಿದೆ. ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗಿರುವುದನ್ನು ಅಂಕಿ-ಅಂಶಗಳು ಖಚಿತಪಡಿಸಿವೆ. ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಂತಹ ವಿಚಾರಗಳು ಗಮನಕ್ಕೆ ಬಂದ ಕೂಡಲೇ ಮಕ್ಕಳ ಸಹಾಯವಾಣಿಗೆ ದೂರು ನೀಡಿ ಎಂದು ಸಲಹೆ ನೀಡಿದರು. ಪ್ರೀತಿ, ಪ್ರೇಮದ ನೆಪದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ. ಪೋಟ್ರೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಪ್ರೀತಿ-ಪ್ರೇಮಕ್ಕೆ ಸಂಬಂಧಿಸಿದವು ಹೆಚ್ಚಾಗಿವೆ. ಈ ಬಗ್ಗೆ ಬಾಲಕ-ಬಾಲಕಿಯರು ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಹೇಳಿದರು.












Click it and Unblock the Notifications