ದಲಿತರೇ ನಿರ್ಣಾಯಕವಾಗಲಿದ್ದಾರೆ ಎಂಬ ಪರಂ ಮಾತಿನ ಅರ್ಥವೇನು?
ಬೆಂಗಳೂರು, ಆಗಸ್ಟ್ 31 : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಲಿಂಗಾಯತ 'ಧರ್ಮೀಯ'ರೂ ಅಲ್ಲ, ಒಕ್ಕಲಿಗ ಪಂಗಡದವರೂ ಅಲ್ಲ, ಬದಲಿಗೆ ಕರ್ನಾಟಕದಲ್ಲಿ ಶೇ.23ರಷ್ಟು ಇರುವ ದಲಿತ ವರ್ಗದವರು ನಿರ್ಧರಿಸಲಿದ್ದಾರೆಯೆ?
ಮತದಾರರಲ್ಲಿ ಹೀಗೊಂದು ಅಚ್ಚರಿಯ ಪ್ರಶ್ನೆ ಮೂಡಿದರೂ ಅಚ್ಚರಿಯಿಲ್ಲ. ಸದ್ಯದ ಬೆಳವಣಿಗೆಗಳನ್ನು ನೋಡಿದರೆ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರು ದಲಿತರ ಮನೆಮನೆಗೆ ಭೇಟಿ ನೀಡಿ, ಬಾಳೆಲೆಯಲ್ಲಿ ಊಟ ಮಾಡಿ ಪೋಸು ಕೊಡುತ್ತಿರುವುದು ನೋಡಿದರೆ ಈ ಅಚ್ಚರಿಯ ಪ್ರಶ್ನೆಗೆ ಉತ್ತರ ಸಿಕ್ಕೇಸಿಗುತ್ತದೆ.
ಮುಖ್ಯಮಂತ್ರಿ ಪಟ್ಟದ ಮೇಲೆ ಒಂದು ಕಣ್ಣು ಇಟ್ಟೇ ಇರುವ, ಕೆಪಿಸಿಸಿ ಅಧ್ಯಕ್ಷ, ದಲಿತ ಮುಖಂಡ ಡಾ. ಜಿ. ಪರಮೇಶ್ವರ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಸಿದ್ದರಾಮಯ್ಯನವರನ್ನು ಕೆರಳಿಸಿದ್ದರೂ ಆಶ್ಚರ್ಯವಿಲ್ಲ. ಅದೇನೆಂದರೆ, "ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಲಿತ ಮತದಾರರು ನಿರ್ಣಾಯಕವಾಗಲಿದ್ದಾರೆ!"
ಒಂದು ವೇಳೆ ಸಿ ಫೋರ್ ಸಮೀಕ್ಷೆ ನಿಜವಾಗಿ, ಕಾಂಗ್ರೆಸ್ ಬಹುಮತ ಪಡೆದುಕೊಂಡರೆ, ಆಗ ತಾವೇ ಮುಖ್ಯಮಂತ್ರಿ ಪದವಿ ಏರಲಿರುವುದಾಗಿ ಪರಮೇಶ್ವರ ಅವರು ನೇರವಾಗಿಯೇ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿರುವ ಡಜನ್ ಗಟ್ಟಲೆ ನಾಯಕರ ಕಣ್ಣೂ ಕೆಂಪಾಗುವಂತೆ ಮಾಡಿದ್ದಾರೆ.
ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದಲೂ ಇದೇ ನಡೆದೇ ಇದೆ. ಒಂದು ವೇಳೆ 2013ರ ಚುನಾವಣೆಯಲ್ಲಿ ಪರಮೇಶ್ವರರೇನಾದರೂ ಕೊರಟಗೆರೆ ಕ್ಷೇತ್ರದಿಂದ ಗೆದ್ದಿದ್ದರೆ ಈಗಿನ ಚಿತ್ರಣವೇ ಇರುತ್ತಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯದ ಸಂಗತಿ.
ಸಿದ್ದರಾಮಯ್ಯನವರು ಸಂಪುಟ ವಿಸ್ತರಣೆ ಮಾಡಿರುವ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ, ಹೈಕಮಾಂಡಿಗೆ ಇರುಸುಮುರುಸುವಾಗುವಂತೆ ಭುಗಿಲೆದ್ದಿದೆ. ನೋಡುವವರು ತಮಾಷೆ ನೋಡಿ ಮಜಾ ಮಾಡುತ್ತಿದ್ದಾರೆ. ಹೈಕಮಾಂಡ್ ಮಾತ್ರ ಏನೂ ಮಾಡಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದೆ.

ಸಿದ್ದರಾಮಯ್ಯ ಯಾರ ಮಾತನ್ನೂ ಕೇಳುತ್ತಿಲ್ಲ
ಸಿದ್ದರಾಮಯ್ಯನವರು ಯಾರ ಮಾತನ್ನೂ ಕೇಳುತ್ತಿಲ್ಲ, ಕೆಪಿಸಿಸಿ ಅಧ್ಯಕ್ಷರ ಮಾತನ್ನೂ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ವೇಳೆಯೂ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮೂಲ ಕಾಂಗ್ರೆಸ್ಸಿಗರೆ ಏನು ಉತ್ತರ ಕೊಡುವುದು ಎಂಬ ನೋವನ್ನು ಪರಮೇಶ್ವರ್ ಅವರು ಆಪ್ತರ ಬಳಿ ಹಂಚಿಕೊಂಡಿದ್ದಾರೆ.

ಪ್ರಯತ್ನ ನಮ್ಮದು, ಶ್ರೇಯ ಸಿದ್ದರಾಮಯ್ಯನವರದು
ಮನೆ ಮನೆಗೆ ಕಾಂಗ್ರೆಸ್ ನಡಿಗೆ ಎಂಬ ಅಭಿಯಾನವನ್ನು ಮಾಡುವುದು ಮಾತ್ರ ನಾವು, ಆದರೆ, ಅದರ ಶ್ರೇಯ ಮಾತ್ರ ಪಡೆದುಕೊಳ್ಳುತ್ತಿರುವುದು ಸಿದ್ದರಾಮಯ್ಯನವರು ಎಂದು ಪಕ್ಷದ ಕಚೇರಿಗೂ ಹೋಗದೆ, ಮನೆಯಿಂದ ಹೊರಗೂ ಬೀಳದೆ ಕುಳಿತಿರುವ ಪರಮೇಶ್ವರ್ ಅವರು ತಮ್ಮ ಮನದಾಳದ ಇಂಗಿತವನ್ನು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಸಮನ್ವಯ ಸಮಿತಿ ಹೆಸರಿಗೆ ಮಾತ್ರವಿದೆ
ಪಕ್ಷದಲ್ಲಿ ಏನಾದರೂ ಹೊಂದಾಣಿಕೆ ಕೊರತೆ ಇದ್ದರೆ, ಭಿನ್ನಾಭಿಪ್ರಾಯಗಳಿದ್ದರೆ ಅದಕ್ಕೆ ಸಮನ್ವಯ ಸಮಿತಿ ಇದೆ. ಸಿದ್ದರಾಮಯ್ಯನವರು ಈ ಸಮನ್ವಯ ಸಮಿತಿಯ ಮಾತನ್ನೂ ಕೇಳುತ್ತಿಲ್ಲ. ಪಕ್ಷದ ಅಧ್ಯಕ್ಷರ ಜೊತೆ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆಯನ್ನೂ ಮಾಡುವುದಿಲ್ಲ. ಹೀಗಾದರೆ ಹೇಗೆ ಎಂಬ ಪ್ರಶ್ನೆಯನ್ನು ಪರಮೇಶ್ವರ್ ಅವರು ಕೇಳಿದ್ದಾರೆ.

ಪ್ರಭಾವಶಾಲಿ ನಾಯಕರಾಗಿ ಗುರುತಿಸಿಕೊಂಡಿಲ್ಲ
ಈ ವಿಚಾರಗಳೇನೇ ಇರಲಿ, ಪರಮೇಶ್ವರ ಅವರು ದಲಿತರ ವರ್ಗಕ್ಕೆ ಸೇರಿದವರಾಗಿದ್ದರೂ, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಎರಡು ಬಾರಿ ಅಲಂಕರಿಸಿದ್ದರೂ, ಅಂತಹ ಪ್ರಭಾವಶಾಲಿ ದಲಿತ ನಾಯಕರಾಗಿ ಗುರುತಿಸಿಕೊಂಡೇ ಇಲ್ಲ. ದಲಿತರ ಪರವಾಗಿ ಘೋಷಿಸಲಾದ ಎಲ್ಲ ಯೋಜನೆಗಳ, ಭಾಗ್ಯಗಳ ಶ್ರೇಯಸ್ಸನ್ನು ಸಿದ್ದಯ್ಯರಾಮಯ್ಯನವರೇ ಪಡೆದುಕೊಂಡಿದ್ದಾರೆ.












Click it and Unblock the Notifications