ಕಾಂಗ್ರೆಸ್ ಇನ್ನಾದರೂ ಸುಳ್ಳುಗಳನ್ನು ಹೇಳುವುದನ್ನು ನಿಲ್ಲಿಸುತ್ತದೆಯೇ: ತೇಜಸ್ವಿ ಸೂರ್ಯ
ಬೆಂಗಳೂರು, ಜೂನ್ 17: ಬಿಜೆಪಿ ನಾಯಕರಿಗೆ ಎಫ್‌ಸಿಐ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್‌ಮೆಂಟ್ ಪತ್ರ ತೋರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕರ್ನಾಟಕ ಸರ್ಕಾರ ಹೆಚ್ಚುವರಿ ಅಕ್ಕಿ ಮಾರಾಟಕ್ಕೆ ಮನವಿ ಮಾಡಿದ ನಂತರ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ OMSS ನೀತಿಯನ್ನು ಬದಲಾಯಿಸಿದೆ ಎಂದು ಶ್ರೀ ಸಿದ್ದರಾಮಯ್ಯ ಕರ್ನಾಟಕದ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಜೂನ್ 8 ರಂದು ನಡೆದ ಅಂತರ-ಸಚಿವಾಲಯ ಸಮಿತಿಯ ಸಭೆಯ ಅನುಸಾರವಾಗಿ, ರಾಜ್ಯ ಸರ್ಕಾರವು ಪ್ರಾದೇಶಿಕ ಎಫ್ಸಿಐಗೆ ವಿನಂತಿಸುವ 4 ದಿನಗಳ ಮೊದಲು, ದೇಶಾದ್ಯಂತ ಗೋಧಿ ಮತ್ತು ಅಕ್ಕಿಯ ಬೆಲೆಯಲ್ಲಿನ ಹೆಚ್ಚಳದ ದೃಷ್ಟಿಯಿಂದ OMSS ನೀತಿಯಲ್ಲಿ ಬದಲಾವಣೆಯನ್ನು ಈಗಾಗಲೇ ಸೂಚಿಸಲಾಗಿದೆ ಎಂದು ತೋರಿಸುತ್ತದೆ.
ಈ ನೀತಿಯನ್ನು ಮರುಪರಿಶೀಲಿಸುವ ಪ್ರಕ್ರಿಯೆಯು ಕರ್ನಾಟಕ ಚುನಾವಣೆಗಳು ನಡೆಯುವ ಮುಂಚೆಯೇ ಮಧ್ಯಂತರ ಸಮಿತಿಯಿಂದ ಮೇ ತಿಂಗಳ ಆರಂಭದಲ್ಲಿಯೇ ಪ್ರಾರಂಭವಾಯಿತು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
ಇದು ಈ ಕೆಳಗಿನವುಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ
1. ಕಾಂಗ್ರೆಸ್ ಮತ್ತು ಶ್ರೀ ಸಿದ್ದರಾಮಯ್ಯ ನವರು ತಮ್ಮ ಅಸಮರ್ಥತೆಯನ್ನು ಮರೆಮಾಚಲು ಸುಳ್ಳನ್ನು ಹೇಳುತ್ತಿದ್ದಾರೆ, ಮತ್ತು ಮೋದಿ ಸರ್ಕಾರವನ್ನು ದೂಷಿಸಲು ಹತಾಶವಾಗಿ ಪ್ರಯತ್ನಿಸುತ್ತಿದ್ದಾರೆ.
2. ಕೇಂದ್ರ ಸರ್ಕಾರದ ಸಬ್ಸಿಡಿಯ ಅಕ್ಕಿ ಯೋಜನೆಯನ್ನು, ತಮ್ಮದೇ ಯೋಜನೆಯೆಂದು ಬಿಂಬಿಸಿ ಜಾರಿಗೆ ತರಲು ಕಾಂಗ್ರೆಸ್ ಬಯಸಿತ್ತು ಆದರೆ ಈಗ ಸಿಕ್ಕಿಬಿದ್ದಾಗ, ಸಾರ್ವಜನಿಕರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದೆ.
3. ಚುನಾವಣೆಯ ಭರವಸೆಯಂತೆ ಕರ್ನಾಟಕದ ಜನರಿಗೆ 10 ಕೆಜಿ ಅಕ್ಕಿ ನೀಡುವ ಬದ್ಧತೆಯ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದ್ದರೆ, ಅವರು ಮುಕ್ತ ಮಾರುಕಟ್ಟೆಯಿಂದ 10 ಕೆಜಿ ಅಕ್ಕಿಯನ್ನು ಖರೀದಿಸಿ ಮತ್ತು ಮೋದಿ ಸರ್ಕಾರ ನೀಡುವ 5 ಕೆಜಿ ಅಕ್ಕಿಗೆ ಹೆಚ್ಚುವರಿಯಾಗಿ NFSA ಅಡಿಯಲ್ಲಿ ವಿತರಿಸಬೇಕು ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್‌ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಸವಾಲು ಹಾಕಿದ್ದರು. ಅದಕ್ಕೆ ಇಲ್ಲಿದೆ ಎಫ್.ಸಿ.ಐ ಕಮಿಟ್‌ಮೆಂಟ್ ಪತ್ರ ಎಂದು ಸಿಎಂ ಸಿದ್ದರಾಮಯ್ಯ ಪತ್ರ ಬಿಡುಗಡೆ ಮಾಡಿದ್ದರು.
ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು. ಸಿ.ಟಿ.ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು, ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ ಎಂದು ಕಿಡಿಕಾರಿದ್ದರು.












Click it and Unblock the Notifications