ಅನ್ನಭಾಗ್ಯ; BPL ಕಾರ್ಡ್ ತಪ್ಪುವ ಆತಂಕದಲ್ಲಿದ್ದ ಯಲ್ಲೋ ಬೋರ್ಡ್ ಕಾರು ಹೊಂದಿದ್ದವರಿಗೆ ನೆಮ್ಮದಿ ಸುದ್ದಿ
ಬೆಂಗಳೂರು, ಆಗಸ್ಟ್ 05: ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಶುಕ್ರವಾರ ಘೋಷಣೆ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ವಂತ ಕಾರು ಹೊಂದಿದ್ದು ಬಿಪಿಎಲ್ ಕಾರ್ಡ್ ಪಡೆದಿದ್ದವರಿಗೆ ಸರ್ಕಾರ ಶಾಕ್ ನೀಡಿದ್ದು, ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಯಲ್ಲೋ ಬೋರ್ಡ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇರಲಿದೆ. ದುಡಿಯುವ ಉದ್ದೇಶದಿಂದ ಕಾರು ಖರೀದಿಸಿದವರ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ. ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಯಲ್ಲೋ ಬೋರ್ಡ್ ವಾಹನವಿದ್ದ ಕಾರಣಕ್ಕೆ ರದ್ದಾಗಿರುವ ಬಿಪಿಎಲ್ ಗಳನ್ನು ಮರು ವಿತರಣೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಅವರು, ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಸೂಚನೆ ನೀಡಲಾಗಿದ್ದು, ನೀತಿ ಸಂಹಿತಿ ಜಾರಿ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜೊತೆಗೆ ಪಡಿತರ ಕಾರ್ಡ್ಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸೆಪ್ಟೆಂಬರ್‌ನಿಂದ ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಗ್ಯಾರಂಟಿ ಪೈಕಿ, ಅನ್ನಭಾಗ್ಯ ಯೋಜನೆಯಡಿಯಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆ.ಜಿ ಅಕ್ಕಿ ಸೇರಿ 10 ಕೆ.ಜಿ ಅಕ್ಕಿಯನ್ನು ವಿತರಿಸುವುದಾಗಿ ಹೇಳಿತ್ತು. ಅಕ್ಕಿ ಕೊರತೆಯ ಕಾರಣ ಪಡಿತರದಾರರ ಖಾತೆಗೆ ಹಣವನ್ನು ಜಮಾ ಮಾಡಲಾಗಿತ್ತು. ಆದರೆ, ಹೆಚ್ಚು ದಿನ ಹಣ ನೀಡಲು ಆಗುವುದಿಲ್ಲ. ಆದ್ದರಿಂದ ಸೆಪ್ಟೆಂಬರ್‌ನಿಂದಲೇ 10 ಕೆಜಿ ಅಕ್ಕಿ ನೀಡಲು ಚಿಂತನೆ ನಡೆಯುತ್ತಿದೆ. ಅಕ್ಕಿ ಸಿಗದಿದ್ದರೆ ದುಡ್ಡು ಹಾಕುತ್ತೇವೆ ಎಂದು ಹೇಳಿದರು.












Click it and Unblock the Notifications