ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?
ಕೊಡಗು, ನವೆಂಬರ್ 12 : ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾದ ಮಡಿಕೇರಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಷ್ಟಕ್ಕೂ ಕೊಡವರು ಟಿಪ್ಪು ಸುಲ್ತಾನ್ ವಿರೋಧಿಸುವುದೇಕೆ?.
ಕರ್ನಾಟಕ ಸರ್ಕಾರ ಪದೇ-ಪದೇ ಟಿಪ್ಪು ಸುಲ್ತಾನ್ ಜಾತ್ಯಾತೀತ ಮನೋಭಾವದವನು, ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಲೇ ಇದೆ. ಆದರೆ, ಕೊಡಗಿನವರು ಮಾತ್ರ ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡುವುದು ಬೇಡ ಎಂದು ಕೊಡಗಿನ ಹಿರಿಯರೂ ಅಭಿಪ್ರಾಯಪಡುತ್ತಿದ್ದಾರೆ. [ಟಿಪ್ಪು ವಿರುದ್ಧ ಕ್ರೈಸ್ತ ಸಮುದಾಯದ ವಿರೋಧವೇಕೆ?]

ಟಿಪ್ಪುವಿಗೆ ಗೌರವವಿಲ್ಲ : ಟಿಪ್ಪು ಸುಲ್ತಾನ್‌ಗೆ ಕೊಡಗಿನಲ್ಲಿ ಜನರು ಗೌರವ ಕೊಡುವುದಿಲ್ಲ. ಟಿಪ್ಪು ಮತ್ತು ಕೊಡವರು ಯಾವಾಗಲೂ ಶತ್ರುಗಳು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಕೊಡಗನ್ನು ವಶಪಡಿಸಿಕೊಳ್ಳಲು ಟಿಪ್ಪು ಹಲವು ಬಾರಿ ಪ್ರಯತ್ನ ನಡೆಸಿದ್ದ, ಆತನ ವಿರುದ್ಧ ವಿರಾವೇಶದಿಂದ ಹೋರಾಡಿದ್ದ ಕೊಡಗಿನ ಜನರು ಟಿಪ್ಪು ಸೇನೆಗೆ ಸೋಲಿನ ರುಚಿ ತೋರಿಸಿದ್ದರು. ['ನವೆಂಬರ್ 10ರಂದು ಟಿಪ್ಪು ಜಯಂತಿ ಏಕೆ?']
ಕೊಡಗನ್ನು ಗೆದ್ದುಕೊಂಡು ಅಲ್ಲಿಂದ ಮಂಗಳೂರು ತಲುಪಿ, ಬಂದರಿನ ಮೂಲಕ ವಾಣಿಜ್ಯ ಚಟುವಟಿಕೆ ನಡೆಸುವುದು ಟಿಪ್ಪು ಆಲೋಚನೆಯಾಗಿತ್ತು. ಇದಕ್ಕಾಗಿ ಆತ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ. ಆದರೆ, ಸೋಲು ಅನುಭವಿಸಿದ್ದ. ಹೈದರಾಲಿ ಕೂಡ ಕೊಡಗನ್ನು ಪಡೆಯಲು ಹೋಗಿ ಸೋಲು ಕಂಡಿದ್ದ. [ಕೊಡಗು ಜಿಲ್ಲೆಯಾದ್ಯಂತ ಅಘೋಷಿತ ಬಂದ್]
ಭಾರತೀಯ ಸೇನೆಗೆ ತನ್ನದೇ ಕೊಡುಗೆ ನೀಡಿರುವ ಕೊಡವರು ವಿರಾವೇಶಕ್ಕೆ ಹೆಸರಾದವರು. ಟಿಪ್ಪು ಮತ್ತು ಹೈದರಾಲಿ ಅವರು ಯುದ್ಧಕ್ಕೆ ಬಂದಾಗ ಹೋರಾಡಿ ಅವರು ಸೋಲುವಂತೆ ಮಾಡಿದ ಕೀರ್ತಿ ಕೊಡವರದ್ದು. ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿಯನ್ನು ತಲುಪಲು ಟಿಪ್ಪು ಹಲವು ಬಾರಿ ಮಾಡಿದ ಪ್ರಯತ್ನ ವಿಫಲವಾಗಿತ್ತು.
ತಂತ್ರ ರೂಪಿಸಿದ ಟಿಪ್ಪು : ಇತಿಹಾಸ ಹೇಳುವಂತೆ ಕೊಡವರ ವಿರುದ್ಧ ಯುದ್ಧದಲ್ಲಿ ಜಯಗಳಿಸುವುದು ಅಸಾಧ್ಯ ಎಂದು ತಿಳಿದ ಟಿಪ್ಪು ಬೇರೆ ತಂತ್ರವನ್ನು ರೂಪಿಸಿದ. ಕೊಡವರಿಗೆ ಸ್ನೇಹದ ಹಸ್ತವನ್ನು ಚಾಚಿದ. ಟಿಪ್ಪುವನ್ನು ನಂಬಿ ಕೊಡವರು ಬಹಳ ದೊಡ್ಡ ತಪ್ಪು ಮಾಡಿದರು.
ಕೊಡವರಿಗೆ ಸ್ನೇಹದ ಹಸ್ತ ಚಾಚಿದ ಟಿಪ್ಪು ಅವರನ್ನು ಒಂದು ಕಡೆ ಸೇರಿಸಿದ. ಕೊಡಗಿನವರು ಗುಂಪು ಗೂಡಿದ ತಕ್ಷಣ ಟಿಪ್ಪುವಿನ ಸೈನಿಕರು ನಿರಾಯುಧರಾಗಿದ್ದ ಕೊಡವರ ಮೇಲೆ ದಾಳಿ ಮಾಡಿದರು. ನೂರಾರು ಜನರ ಶಿರಚ್ಛೇಧನ ಮಾಡಲಾಯಿತು. ಹಲವರನ್ನು ಸೆರೆಹಿಡಿಯಲಾಯಿತು.
ಸೆರೆಹಿಡಿದ ಸಾವಿರಾರು ಕೊಡವರನ್ನು ಶ್ರೀರಂಗಪಟ್ಟಣಕ್ಕೆ ಕರೆತರಲಾಯಿತು. ಅಲ್ಲಿ ಅವರನ್ನು ಮತಾಂತರ ಮಾಡಲಾಯಿತು ಎನ್ನುತ್ತದೆ ಇತಿಹಾಸ. ಇದರಿಂದಾಗಿ ಕೊಡವರಿಗೆ ಟಿಪ್ಪುವಿನ ಬಗ್ಗೆ ಗೌರವಿಲ್ಲ. ಟಿಪ್ಪು ಎಷ್ಟು ಮಂದಿ ಕೊಡವರನ್ನು ಹತ್ಯೆ ಮಾಡಿದ, ಎಷ್ಟು ಜನರನ್ನು ಮತಾಂತರ ಮಾಡಿದ ಎಂಬುದಕ್ಕೆ ಇಂದಿಗೂ ಸರಿಯಾದ ಲೆಕ್ಕ ಸಿಗುತ್ತಿಲ್ಲ.












Click it and Unblock the Notifications