ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?

ಮಡಿಕೇರಿ, ಮಾರ್ಚ್ 29: ಕೊಡಗಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಮಾಲ್ ಮಾಡುವುದರೊಂದಿಗೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಿದ್ದು ಇತಿಹಾಸ. ಬಹುಶಃ ಕೊಡಗಿನಲ್ಲಿ ಇಂತಹದೊಂದು ದುಸ್ಥಿತಿ ಬಿಜೆಪಿಗೆ ಬರುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಆದರೆ ಅದಕ್ಕೆ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಒಂದೆಡೆಯಾದರೆ, ಮತ್ತೊಂದೆಡೆ ಜನ ಹೊಸಮುಖಗಳನ್ನು ಬಯಸಿದ್ದರು. ಇದೆಲ್ಲದರ ಆಚೆಗೂ ಕಾಂಗ್ರೆಸ್ ನ ಹಲವು ನಾಯಕರ ಶ್ರಮ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿತ್ತು.

ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಈಗ ಲೋಕಸಭಾ ಚುನಾವಣೆಯೂ ಬಂದಿದೆ. ಆದರೆ ಕಳೆದ ವರ್ಷದ ಜೋಶ್ ಈಗಲೂ ಕಾಂಗ್ರೆಸ್ ನಲ್ಲಿ ಇದೆಯಾ? ಎಂಬ ಪ್ರಶ್ನೆಮಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಕಾರಣ ಕಳೆದ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮಗೆ ಸ್ಥಾನಮಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದ ನಾಯಕರಿಗೆ ಇದುವರೆಗೂ ಯಾವುದೇ ಸ್ಥಾನಮಾನ ನೀಡಿಲ್ಲ. ಹೀಗಾಗಿ ಅವರಿಗೆ ಭ್ರಮನಿರಸನವಾಗಿದೆ.

Why Kodagu Congress Leaders Have Not Campaigned For The Lok Sabha Elections

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದ್ದು, ಕೊಡಗಿನಲ್ಲಿರುವ ಮುಸ್ಲಿಂ, ಎಸ್ಸಿ, ಎಸ್ಟಿ ಮತಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಗೆದ್ದಿದ್ದು ಕೂಡ ದೊಡ್ಡ ಮಟ್ಟದ ಅಂತರದಲ್ಲಂತು ಅಲ್ಲ ಕೇವಲ 4ಸಾವಿರ ಮತಗಳ ಆಸುಪಾಸಿನಲ್ಲಿ. ಹೀಗಾಗಿ ಮತ್ತೆ ಅದೇ ಗೆಲುವನ್ನು ಉಳಿಸಿಕೊಳ್ಳಬೇಕಾದರೆ ಅವತ್ತು ಗೆಲುವಿಗಾಗಿ ದುಡಿದ ನಾಯಕರನ್ನು ಜೊತೆಗೆ ಕರೆದುಕೊಂಡು ಹೋಗಬೇಕಾಗಿದೆ. ಅವರ ಬಗ್ಗೆ ತಾತ್ಸಾರ ತೋರಿದರೆ ಅದರ ಪರಿಣಾಮಗಳು ಲೋಕ ಸಭಾ ಚುನಾವಣೆ ಮೇಲೆ ಬೀರಲಿದೆ.

ಕೆಲವು ನಾಯಕರು ಮೌನಕ್ಕೆ ಶರಣಾಗಿದ್ದೇಕೆ?

ಅವತ್ತು ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಲೇ ಬೇಕೆಂದು ಹಲವು ಕಾಂಗ್ರೆಸ್ ನಾಯಕರು ಓಡಾಟ ನಡೆಸಿದ್ದರು. ಇವರೆಲ್ಲರೂ ಇಷ್ಟುವರೆಗಿನ ರಾಜಕೀಯ ಜೀವನದಲ್ಲಿ ಯಾವುದೇ ಸ್ಥಾನಮಾನ ಸಿಗದೆ ಕೇವಲ ಕಾರ್ಯಕರ್ತರಾಗಿ, ಮುಖಂಡರು ಎಂಬ ಹಣೆಪಟ್ಟಿಗಷ್ಟೇ ಸೀಮಿತರಾಗಿ ಉಳಿದಿದ್ದರು. ಅವರ ಜತೆಗೆ ಬೇರೆ ಪಕ್ಷದಿಂದ ಬಂದವರೂ ಇದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮನ್ನು ಗುರುತಿಸಿ ಏನಾದರೊಂದು ಸ್ಥಾನ ನೀಡಬಹುದೆಂದು ನಂಬಿದ್ದರು. ಆದರೆ ಅದು ಸಾಧ್ಯಿವಾಗದ ಕಾರಣದಿಂದ ಕೆಲವು ನಾಯಕರು ಮೌನಕ್ಕೆ ಶರಣಾಗಿರುವುದು ಎದ್ದು ಕಾಣಿಸುತ್ತಿದೆ.

ಇನ್ನು ಕೊಡಗಿನಲ್ಲಿ ಸುಮಾರು ಎರಡು ದಶಕಗಳ ಕಾಲ ಬಿಜೆಪಿಗೆ ಸೇರಿದ ಶಾಸಕರೇ ಇದ್ದರು. ಅವರೇನು ಕೆಲಸವನ್ನೇ ಮಾಡಿಲ್ಲ ಎಂದು ಬಿಂಬಿಸಿ ಬದಲಾವಣೆ ಕೇಳಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿದೆ. ಕೊಡಗಿನಲ್ಲಿ ಎಲ್ಲವೂ ಬದಲಾಯಿತಾ? ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ. ಕೊಡಗಿನಲ್ಲಿ ಕಳೆದ 11 ತಿಂಗಳಲ್ಲಿ 25ಕ್ಕೂ ಹೆಚ್ಚು ಜನ ಆನೆ ಮಾನವ ಸಂಘರ್ಷದಿಂದ ಸಾವನ್ನಪ್ಪಿದ್ದಾರೆ. ಇದಕ್ಕೊಂದು ಸೂಕ್ತ ಪರಿಹಾರ ಸಿಕ್ಕಿಲ್ಲ. ಇನ್ನು ಹುಲಿ, ಚಿರತೆ ಹೀಗೆ ವನ್ಯಜೀವಿ ಮತ್ತು ಮಾನವ ಸಂಘರ್ಷ ಮುಂದುವರೆದಿದೆ. ಇದಕ್ಕೆ ಇತಿಶ್ರೀ ಹಾಡುವ ಪ್ರಯತ್ನಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಇಲ್ಲದಿಲ್ಲ.

Why Kodagu Congress Leaders Have Not Campaigned For The Lok Sabha Elections

ಕಾಂಗ್ರೆಸ್‌ಗೆ ಎಂಟ್ರಿಕೊಟ್ಟಿದ್ದ ಸಂಕೇತ್ ಪೂವಯ್ಯ

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದ್ದು ಸಾಮಾಜಿಕ ಕಾರ್ಯಕರ್ತ, ಪರಿಸರ ಪ್ರೇಮಿ, ಮುಖಂಡ ಸಂಕೇತ್ ಪೂವಯ್ಯ ಅವರ ಶ್ರಮ ಎಂದರೆ ತಪ್ಪಾಗಲಾರದು. ಕೊಡಗಿನ ಮಟ್ಟಿಗೆ ಸಂಕೇತ್ ಪೂವಯ್ಯ ಅವರಿಗೊಂದಿಷ್ಟು ಹೆಸರಿದೆ. ರಾಜಕೀಯದಲ್ಲಿ ಏನೇ ಸರ್ಕಸ್ ಮಾಡಿದರೂ ಅವರು ಯಶಸ್ಸು ಕಾಣಲಿಲ್ಲ ಎನ್ನುವುದು ಅಷ್ಟೇ ಬೇಸರದ ಸಂಗತಿ. ತಾವು ಸಂಪಾದನೆ ಮಾಡಿದ ಹಣವನ್ನೆಲ್ಲ ಪಕ್ಷಗಳಿಗೆ ಸುರಿದು ರಾಜಕೀಯ ಮಾಡಿದರೂ ಮುನ್ನಲೆಗೆ ಬರಲೇ ಇಲ್ಲ.

ಒಂದೆರಡು ದಶಕಗಳ ಹಿಂದೆ ಜನತಾಪಕ್ಷವನ್ನು ಕಟ್ಟಿ ಬೆಳೆಸುವ ಉತ್ಸಾಹ ತೋರಿದ ಅವರು ಅದರಲ್ಲಿ ಯಶಸ್ಸು ಆಗಲಿಲ್ಲ. ಆ ನಂತರ ಜೆಡಿಎಸ್ ನಲ್ಲಿಯೂ ಸಾಕಷ್ಟು ಕೆಲಸ ಮಾಡಿದರೂ. ಕೊಡಗಿನಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿಬೆಳೆಸುವಲ್ಲಿ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದರಾದರೂ ಗೆಲುವು ಕಾಣಲಿಲ್ಲ. ಆದಾದ ನಂತರ ಹತ್ತು ಹಲವು ರಾಜಕೀಯ ಬದಲಾವಣೆಗಳಲ್ಲಿ ಮೌನಕ್ಕೆ ಶರಣರಾದರು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಪಣತೊಟ್ಟು ಜೆಡಿಎಸ್ ತೊರೆದು ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್ ಸೇರಿದರು.

ಸಂಕೇತ್ ಪೂವಯ್ಯಗೆ ಸಿಗದ ಸ್ಥಾನಮಾನ

ಅವತ್ತು ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಾಯಕರು ಮೂರೇ ದಿನದಲ್ಲಿ ಕೆಪಿಸಿಸಿಯ ವಕ್ತರನ್ನಾಗಿ ನೇಮಿಸಿದರು. ಜಿಲ್ಲೆಯಾದ್ಯಂತ ಓಡಾಡಿದ ಸಂಕೇತ್ ಪೂವಯ್ಯ ಕಾಂಗ್ರೆಸ್ ನ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎ.ಎಸ್.ಪೊನ್ನಣ್ಣ ಅವರ ಜತೆಗೆ ನಿಂತರು. ಅದೆಲ್ಲದರ ಪರಿಣಾಮ ಒಂದಷ್ಟು ಮತಗಳು ಬಂದಿವೆ ಎನ್ನುವುದನ್ನು ತಳ್ಳಿಹಾಕಲಾಗದು. ಆದರೆ ವಿಧಾನಸಭಾ ಚುನಾವಣೆ ವೇಳೆ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡಿದ ಸಂಕೇತ್ ಪೂವಯ್ಯ ಸೇರಿದಂತೆ ಒಂದಷ್ಟು ನಾಯಕರು ಲೋಕಸಭಾ ಚುನಾವಣೆಯಲ್ಲಿ ಅಂತಹ ಯಾವುದೇ ಉತ್ಸಾಹ ತೋರಿದಂತೆ ಕಾಣಿಸುತ್ತಿಲ್ಲ.

ಬಹುಶಃ ಕಾಂಗ್ರೆಸ್ ಗೆಲ್ಲುವುದೇ ಇಲ್ಲ ಎಂಬಂತಹ ಸ್ಥಿತಿಯಲ್ಲಿದ್ದ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವಿಗೆ ಸಂಕೇತ್ ಪೂವಯ್ಯ ಸೇರಿದಂತೆ ಹಲವು ನಾಯಕರಿಗೆ ಅವರು ಮಾಡಿದ ಕೆಲಸವನ್ನು ಗುರುತಿಸಿ ಪಕ್ಷದಲ್ಲಿ ಸ್ಥಾನಮಾನಗಳನ್ನು ನೀಡಿದ್ದರೆ, ಇನ್ನಷ್ಟು ಕೆಲಸ ಮಾಡಲು ಅವರಲ್ಲಿ ಉತ್ಸಾಹ ಬರುತ್ತಿತ್ತೇನೋ? ಆದರೆ ಗೆಲುವಿನ ನಾಗಾಲೋಟದಲ್ಲಿ ಕಾಂಗ್ರೆಸ್ ನಾಯಕರು ಪಕ್ಷದ ಗೆಲುವಿಗಾಗಿ ದುಡಿದವರನ್ನು ಗುರುತಿಸದೇ ಇರುವುದು ಜಿಲ್ಲೆಯಲ್ಲಿ ಒಂದಷ್ಟು ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರೆಲ್ಲರೂ ಅಂತರ ಕಾಪಾಡಿಕೊಂಡು ಮೌನಕ್ಕೆ ಶರಣಾಗಿದ್ದಾರೆ.

ಲೋಕದಲ್ಲೂ ಕಮಾಲ್ ಮಾಡುತ್ತಾ ಕಾಂಗ್ರೆಸ್

ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ನಿಜವಾಗಿಯೂ ಅಲ್ಲಿ ಪ್ರಾಬಲ್ಯ ಸಾಧಿಸಿದೆಯಾ? ಈ ಬಾರಿಯೂ ಅಷ್ಟೇ ಹುಮ್ಮಸ್ಸಿನಲ್ಲಿ ನಾಯಕರು ಕೆಲಸ ಮಾಡುತ್ತಿದ್ದಾರಾ? ಎಂಬಿತ್ಯಾಧಿ ಪ್ರಶ್ನೆಗಳಿಗೆ ಉತ್ತರ ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ. ರಾಜ್ಯ ನಾಯಕರು ಕೊಡಗಿನತ್ತ ದೃಷ್ಟಿಹರಿಸಿ ಮೌನಕ್ಕೆ ಜಾರಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋದರೆ ಅದರ ಪರಿಣಾಮಗಳು ಚುನಾವಣೆ ಮೇಲೆ ಆದರೆ ಅಚ್ಚರಿಪಡಬೇಕಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+