ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಿ: ಕೆಪಿಸಿಸಿ ಆಗ್ರಹ
ಬೆಂಗಳೂರು: ರಾಜಧಾನಿ ಬೆಂಗಳೂರಿನಂತಹ ನಗರಗಳಲ್ಲಿ ಆಟೋ, ಕ್ಯಾಬ್ ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ಜಗಳ, ಕಿರುಕುಳ, ಹಲ್ಲೆ, ಬೆದರಿಕೆಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಭಾಷೆಯು ಒಂದು ಪ್ರಮುಖ ಕಾರಣವಾಗಿದೆ. ಕನ್ನಡ ನೆಲದಲ್ಲಿ ಇಲ್ಲಿನ ಬಾಷೆ ಮಾತನಾಡದೇ ಹಿಂದಿ, ಇನ್ನಿತರ ಭಾಷೆ ಮಾತನಾಡಿದ್ದ ಚಾಲಕರು, ಪ್ರಯಾಣಿಕರಿಂದ ತೊಂದರೆ ಆಗಿತ್ತು. ಇಂತಹ ತೊಂದರೆ ತಪ್ಪಿಸುವ ಜೊತೆಗೆ ಕನ್ನಡಕ್ಕೆ ಆದ್ಯತೆ ನೀಡಲು ಆಟೋ, ಕ್ಯಾಬ್ ಇತರ ವಾಣಿಜ್ಯ ವಾಹನಗಳ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸುವಂತೆ ಒತ್ತಾಯಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ 'ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ'ಯ (ಕೆಪಿಸಿಸಿ) ವಕ್ತಾರ ಕೆ.ಎನ್. ನಟರಾಜ ಗೌಡ ಅವರು ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಮರಾಠಿ ಭಾಷೆಗೆ ಪ್ರಾತಿನಿಧ್ಯ ನೀಡಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಎಲ್ಲ ಆಟೋ ಚಾಲಕರಿಗೆ, ಕ್ಯಾಬ್ಸ್/ಟ್ಯಾಕ್ಸಿ ಇನ್ನಿತರ ವಾಣಿಜ್ಯ ಚಾಲಕರಿಗೆ ಕನ್ನಡ ಭಾಷೆ, ಕಲಿಕೆ, ಓದಲು ಕಡ್ಡಾಯ ಮಾಡಬೇಕೆಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಚಾಲಕರಿಗೆ ಕನ್ನಡ ಕಡ್ಡಾಯವೇಕೆ?
ರಾಜ್ಯದಲ್ಲಿ ಮೇ 1 ರಿಂದ ಎಲ್ಲಾ ವಾಣಿಜ್ಯ ವಾಹನ ಚಾಲಕರು ಪರವಾನಗಿ ಪಡೆಯಲು ಸ್ಥಳೀಯ ಭಾಷೆ (ಮರಾಠಿ) ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವಂತೆ ಮಹಾರಾಷ್ಟ್ರದಲ್ಲಿ ನಿಯಮ ಜಾರಿಗೊಳಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಸ್ಥಳೀಯ ಕನ್ನಡಕ್ಕೆ ಅದ್ಯತೆ ಸಿಗಬೇಕಿದೆ. ಯಾರಿಗೆಲ್ಲ ಕನ್ನಡ ಮಾತನಾಡಲು, ಸಂವಹನ ನಡೆಸಲು ಬರುವುದಿಲ್ಲವೇ ಅವರ ವಾಹನಗಳ ಪರವಾನಿಗೆ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಜರುಗಿಸುವಂತೆ ವಿನಂತಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರು ಆಟೋ, ಕ್ಯಾಬ್ ಚಾಲಕರು ಕನ್ನಡದಲ್ಲಿ ಸಂವಹನ ನಡೆಸಲು ಆಗುತ್ತಿಲ್ಲ. ಏಕೆಂದರೆ ಇಲ್ಲಿರುವ ಅದೆಷ್ಟೋ ಚಾಲಕರಿಗೆ ಕನ್ನಡ ಮಾತನಾಡಲು, ಓದಲು, ಸಂವಹನ ನಡೆಸಲು ಬರುವುದಿಲ್ಲ. ಹೀಗಿದ್ದರು ಅವರು ಪರವಾನಿಗೆ ಪಡೆದು ಇಲ್ಲಿ ಜೀವನ ನಡೆಸುತ್ತಿದ್ದಾರೆ. ಅದೆಷ್ಟೋ ಬಾರಿ ಕನ್ನಡೇತರ ಭಾಷೆಯಿಂದ ಕನ್ನಡಿಗರಿಗೆ ತೊಂದರೆ ಆಗಿದೆ. ಸಣ್ಣ ಪುಟ್ಟ ಕಿರುಕುಳ ಸಹ ಕನ್ನಡಿಗರು ಅನುಭವಿಸಬೇಕಾಗಿದೆ. ಆದ್ದರಿಂದ ಕ್ಯಾಬ್, ಆಟೋ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಬೇಕಿದೆ.
ಕನ್ನಡೇತರರಿಗೆ ಪರವಾನಿಗೆ ನೀಡುವವರ ಮೇಲೂ ಕ್ರಮ
ಇನ್ನೊಂದೆಡೆ ಕನ್ನಡ ಕಲಿಯಲು, ಓದಲು ಸರಿಯಾಗಿ ಸಂವನ ನಡೆಸಲು ಬಾರದವರಿಗೆ ಪರವಾನಿಗೆ ನೀಡಬಾರದು. ಒಂದು ವೇಳೆ ಭ್ರಷ್ಟಾಚಾರ ನಡೆಸಿ ಭಾಷೆ ಬರದವರಿಗೆ ಪರವಾನಿಗೆ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಈ ಮೂಲಕ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು. ಇಲ್ಲಿನ ಭಾಷೆ ಕಲಿಯುವುದು, ಕನ್ನಡದಲ್ಳೇ ಸಂವಹನ ನಡೆಸುವುದು ಇಲ್ಲಿದ್ದು ಜೀವನ ಸಾಗಿಸುವ ಪ್ರತಿಯೊಬ್ಬರ ಕರ್ತವ್ಯವೆಂದು ಪ್ರತಿಪಾದಿಸಿದರು.
ಮಹಾರಾಷ್ಟ್ರದಲ್ಲಿ ಮರಾಠ ಕಡ್ಡಾಯ ಮಾಡಿದ್ದಾರೆ. ಮರಾಠಿ ಕಲಿಯಲು, ಓದಲು, ಸಂವಹನ ನಡೆಸುವ ಪರೀಕ್ಷೆಯನ್ನು ಅಲ್ಲಿನ ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‍ಟಿಓ) ನಡೆಸುತ್ತಿದ್ದಾರೆ. ಅದೇ ರೀತಿಯ ಕ್ರಮವನ್ನು ಕರ್ನಾಟಕದಲ್ಲಿ ಜಾರಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.













Click it and Unblock the Notifications