ಕರ್ನಾಟಕ ರಾಜ್ಯ ಬಿಜೆಪಿ ಪಾಲಿಗೆ ಮತ್ತೆ ಬಿಸಿ ತುಪ್ಪ? ಒಂದೇ ಒಂದು ಕ್ಷೇತ್ರಕ್ಕೂ ಟಿಕೆಟ್ ಘೋಷಿಸದ ಕಮಲ ಕಲಿಗಳು!
ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ, 2024ರ ಲೋಕಸಭೆ ಚುನಾವಣೆ ಹತ್ತಿರ ಬಂದ ಕಾರಣಕ್ಕೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದರೂ ಕರ್ನಾಟಕದ ಒಬ್ಬನೇ ಒಬ್ಬ ಅಭ್ಯರ್ಥಿಗೂ ಈಗ ಬಿಜೆಪಿ ಟಿಕೆಟ್ ನೀಡಿಲ್ಲ. ಹಾಗಾದರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸೋಲು ಇದಕ್ಕೆ ಕಾರಣನಾ? ಅಥವಾ ಬಿಜೆಪಿ ಲೆಕ್ಕಾಚಾರ ಏನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಟಾರ್ಗೆಟ್ ಮಾಡಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಬಾವುಟ ನೆಟ್ಟು ಬಲ ಪ್ರದರ್ಶನ ಮಾಡಲು ಸಕಲ ಸಿದ್ಧತೆ ನಡೆಸಿದೆ. ಹೀಗಿದ್ದಾಗಲೇ ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಯ ಮೊರೆ ಹೋಗಿದೆ. ಈ ಎಲ್ಲಾ ಲೆಕ್ಕಾಚಾರದ ಕಾರಣಕ್ಕೆ, ಜೆಡಿಎಸ್ ಜೊತೆಗೆ ಮೈತ್ರಿ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಹೀಗಿದ್ದರೂ ಬಿಜೆಪಿಯ ಕೇಂದ್ರದ ನಾಯಕರು ಈವರೆಗು ಕರ್ನಾಟಕದಿಂದ ಲೋಕಸಭೆಗೆ ಅಭ್ಯರ್ಥಿಗಳ ಪ್ರಕಟಿಸಿಲ್ಲ. ಹಾಗಾದರೆ ಇದಕ್ಕೆ ಅಸಲಿ ಕಾರಣ ಏನು? ಮುಂದೆ ಓದಿ.

ಜೆಡಿಎಸ್ ಮೈತ್ರಿ ಕಾರಣಕ್ಕೆ ಬ್ರೇಕ್?
ಇದೀಗ ಬಿಜೆಪಿ ಮೊದಲನೆ ಪಟ್ಟಿಯಲ್ಲಿ 195 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದೆ. 28 ಮಹಿಳೆಯರಿಗೆ ಟಿಕೆಟ್ ನೀಡಿದ್ದು ಮೊದಲನೇ ಪಟ್ಟಿಯಲ್ಲಿ ಘಟಾನುಘಟಿ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ವಾರಾಣಸಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಹಾಗೇ ಇದರ ಜೊತೆಗೆ ಇನ್ನೂ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಿದ್ದಾಗ ಕನ್ನಡ ನಾಡಿನಲ್ಲಿ ಅಂದ್ರೆ ಕರ್ನಾಟಕದಲ್ಲಿನ ಲೋಕಸಭೆ ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿಯನ್ನೂ ಫೈನಲ್ ಮಾಡಿಲ್ಲ ಬಿಜೆಪಿ. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ನೀಡಲಾಗುತ್ತಿದ್ದು, ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ.
ಕಾರಣ-1: ಮೈತ್ರಿ ಲೆಕ್ಕಾಚಾರ?
ಹೀಗೆ ಕರ್ನಾಟಕದಲ್ಲಿ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡದೇ ಇರಲು ಕಾರಣ ಜೆಡಿಎಸ್ ಜೊತೆಗಿನ ಮೈತ್ರಿ ಲೆಕ್ಕಾಚಾರ ಎನ್ನಲಾಗಿದೆ. ಯಾಕಂದ್ರೆ ಬಿಜೆಪಿ & ಜೆಡಿಎಸ್ ದೋಸ್ತಿ ಮಾಡಿಕೊಂಡು ಲೋಕಸಭೆಯಲ್ಲಿ ಚುನಾವಣೆಯ ಅಖಾಡಕ್ಕೆ ಇಳಿಯುತ್ತಿವೆ. ಹೀಗಿದ್ದಾಗ ಯಾರಿಗೆ ಎಷ್ಟು ಸ್ಥಾನ ಹಂಚಿಕೆ ಆಗಬೇಕು? ದೋಸ್ತಿ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಎಷ್ಟು ಸ್ಥಾನ ಸಿಗುತ್ತದೆ? ಎಂಬ ಬಗ್ಗೆ, ಇನ್ನೂ ಲೆಕ್ಕಾಚಾರ ಫೈನಲ್ ಆಗಿಲ್ಲ. ಹೀಗಾಗಿ ಬಿಜೆಪಿ ಇನ್ನೂ ಕರ್ನಾಟಕದಲ್ಲಿ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು ಫೈನಲ್ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ ಈ ಕಾರಣ ಇನ್ನೂ ನಿಖರವಾಗಿಲ್ಲ.

ಕಾರಣ-2: ಆಂತರಿಕ ಕಿತ್ತಾಟ?
ಇನ್ನೊಂದು ಕಡೆ, ಬಿಜೆಪಿ ಒಳಗೆ ಇದೀಗ ಕಾಡುತ್ತಿರುವ ಆಂತರಿಕ ಕಿತ್ತಾಟವೇ ಪಟ್ಟಿಯನ್ನು ಘೋಷಣೆ ಮಾಡದೇ ಇರುವುದಕ್ಕೆ ಪ್ರಮುಖ ಕಾರಣ ಎಂಬ ಮಾತು ಕೂಡ ಕೇಳಿಬರುತ್ತಿದೆ. ಯಾಕಂದ್ರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಆಂತರಿಕ ತಿಕ್ಕಾಟ ಕಾರಣ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿತ್ತು ಎಂಬ ಆರೋಪ ಇತ್ತು. ಹೀಗಾಗಿ ಇದೀಗ ಕರ್ನಾಟಕದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಂತರ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಿಸಬಹುದು ಎನ್ನಲಾಗುತ್ತಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಬಿಜೆಪಿ ಇದೀಗ ತನ್ನ ಮೊದಲ ಪಟ್ಟಿ ಮೂಲಕವೇ ಹೊಸ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ಮತ್ತೊಮ್ಮೆ ಕೇಂದ್ರದಲ್ಲಿ ಗೆದ್ದು ಅಧಿಕಾರವನ್ನು ಹಿಡಿಯಲು ಬಿಜೆಪಿ ಸರ್ವ ಸಿದ್ಧತೆ ನಡೆಸಿರುವ ಸಮಯದಲ್ಲೇ ಅಳೆದು & ತೂಗಿ ಮೊದಲನೆ ಪಟ್ಟಿ ಪ್ರಕಟವಾಗಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹೀಗಾಗಿ ಬಿಜೆಪಿ ವರಿಷ್ಠ ಪಡೆ, ವಿರೋಧ ಪಕ್ಷ ಮಣಿಸಲು ಯಾವ ರೀತಿ ತಂತ್ರ ಹೂಡಿದೆ ಅಂತಾ ಕಾದು ನೋಡಬೇಕಿದೆ.
ಜೆಡಿಎಸ್‌ಗೆ ಯಾವ ಯಾವ ಕ್ಷೇತ್ರ?
ಈಗಿನ ಪರಿಸ್ಥಿತಿ ನೋಡಿದರೆ ಜೆಡಿಎಸ್ 2024ರ ಲೋಕಸಭೆ ಚುನಾವಣೆಯಲ್ಲಿ, ಒಟ್ಟಾರೆ 4 ಸ್ಥಾನ ಪಡೆಯುವುದು ಗ್ಯಾರಂಟಿ. ಹಾಗೇ ಈಗ 5ನೇ ಸ್ಥಾನಕ್ಕೂ ಪೈಪೋಟಿ ಸಾಗಿದೆ ಅಂತಾ ಹೇಳಲಾಗುತ್ತಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜೆಡಿಎಸ್ ಬೆಂಬಲಿಸಲಿದೆ ಎಂಬುದು ಸ್ಪಷ್ಟ. ಹಾಸನ ಲೋಕಸಭಾ ಕ್ಷೇತ್ರ, ಮಂಡ್ಯ ಲೋಕಸಭಾ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ & ಕೋಲಾರ ಲೋಕಸಭಾ ಕ್ಷೇತ್ರಗಳು ಇದೀಗ ಜೆಡಿಎಸ್‌ನ ಪಾಲಿಗೆ ಸಿಗುವುದು ಬಹುತೇಕ ಗ್ಯಾರಂಟಿ ಆಗಿದೆ. ಆದರೆ ಮೈಸೂರು ಲೋಕಸಭೆ ಕ್ಷೇತ್ರಕ್ಕೂ ಭಾರಿ ಚರ್ಚೆ ಸಾಗಿದೆ, ಆದರೆ ಈ ಭಾಗವನ್ನು ಬಿಜೆಪಿಯೇ ಉಳಿಸಿಕೊಳ್ಳುವ ಸಾಧ್ಯತೆ ಕೂಡ ದಟ್ಟವಾಗಿದೆ.












Click it and Unblock the Notifications