ಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳು
ಬೆಂಗಳೂರು, ಜೂನ್ 03: ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂಪುಟ ರಚನೆ ಕಾರ್ಯವೂ ಆಗಿದ್ದು, ಆಡಳಿತ ಯಂತ್ರ ಪ್ರಾರಂಭಗೊಂಡಿದೆ.
ಕೇಂದ್ರದಲ್ಲಿ ಹೊಸದಾಗಿ ಸರ್ಕಾರ ರಚನೆ ಆದಾಗ ರಾಜ್ಯಗಳ ರಾಜ್ಯಪಾಲರುಗಳನ್ನು ಬದಲಾಯಿಸುವ ಪದ್ಧತಿ ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ. ಇದು ನಿಯಮವಲ್ಲದಿದ್ದರೂ ಹೀಗೊಂದು ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಈ ಬಾರಿ ಕಳೆದ ಬಾರಿಯ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯಪಾಲರ ಬದಲಾವಣೆ ಸಾಧ್ಯತೆ ಕಡಿಮೆ.
ಕರ್ನಾಟಕದ ರಾಜ್ಯಪಾಲರಾಗಿ ವಲುಭಾಯಿ ವಾಲಾ ಅವರು ಅಧಿಕಾರ ಸ್ವೀಕರಿಸಿ ಐದು ವರ್ಷವಾಗುತ್ತಾ ಬಂದಿದ್ದು, ಸೆಪ್ಟೆಂಬರ್ ತಿಂಗಳಿಗೆ ವಲುಭಾಯಿ ವಾಲಾ ಅವರ ಐದು ವರ್ಷ ಪೂರ್ಣಗೊಳ್ಳುತ್ತಿದ್ದು ಅದಕ್ಕೆ ಮುಂಚೆಯೇ ಮತ್ತೊಬ್ಬ ರಾಜ್ಯಪಾಲರನ್ನು ನೇಮಕ ಮಾಡಬೇಕಿದೆ.

ರಾಷ್ಟ್ರಪತಿಗಳಿಂದ ನೇಮಕವಾಗುವ ರಾಜ್ಯಪಾಲರು
ರಾಜ್ಯಪಾಲರ ನೇಮಕವನ್ನು ರಾಷ್ಟ್ರಪತಿಗಳು ಮಾಡುತ್ತಾರೆಯಾದರೂ ಅದನ್ನು ಸೂಚಿಸುವುದು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರವೇ. ಹಾಗಾಗಿ ಈ ಬಾರಿ ರಾಜ್ಯದ ರಾಜಪಾಲರಾಗಿ ಯಾರನ್ನು ನೇಮಿಸುತ್ತಾರೆ ಎಂಬ ಕುತೂಹಲ ಇದೆ. ಕೆಲವು ಹೆಸರುಗಳು ತೇಲಿ ಬರುತ್ತಿದ್ದು, ಇವರಲ್ಲೇ ಒಬ್ಬರು ರಾಜ್ಯದ ರಾಜಪಾಲರಾಗುವ ಸಾಧ್ಯತೆ ಇದೆ.

ರಾಜ್ಯಕ್ಕೆ ಬರಲಿದ್ದಾರಾ ಸುಷ್ಮಾ ಸ್ವರಾಜ್?
ಕಳೆದ ಅವಧಿಯಲ್ಲಿ ವಿದೇಶಾಂಗ ಮಂತ್ರಿಯಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಸುಷ್ಮಾ ಸ್ವರಾಜ್ ಅವರನ್ನು ಕರ್ನಾಟಕದ ರಾಜ್ಯಪಾಲೆಯಾಗಿ ನೇಮಿಸುವ ಸಾಧ್ಯತೆ ಇದೆ. ಸುಷ್ಮಾ ಸ್ವರಾಜ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ, ಅಲ್ಲದೆ ಈ ಬಾರಿ ಅವರು ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಆಗಬಹುದೇ ರಾಜ್ಯಪಾಲೆ?
ಕರ್ನಾಟಕದಲ್ಲಿ ಒಮ್ಮೆ ಲೋಕಸಭೆ ಚುನಾವಣೆ ಎದುರಿಸಿ ಸೋಲನುಭವಿಸಿರುವ ಸುಷ್ಮಾ ಸ್ವರಾಜ್ ಅವರಿಗೆ, ರಾಜ್ಯದ ಬಗ್ಗೆ ಮಾಹಿತಿ ಇದೆ, ಇದು ಅವರ ಆಯ್ಕೆಗಿರುವ ಧನಾತ್ಮಕ ಅಂಶಗಳು. ಆದರೆ ಅವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರೊಂದಿಗೆ ಹತ್ತಿರದಿಂದ ಗುರುತಿಸಿಕೊಂಡಿದ್ದರು ಇದರಿಂದಾಗಿ ಅವರಿಗೆ ಹಿನ್ನಡೆ ಆಗುವ ಸಾಧ್ಯತೆಯೂ ಇದೆ.

ಸುಮಿತ್ರಾ ಮಹಾಜನ್ ಆಗಬಹುದೇ ರಾಜ್ಯಪಾಲೆ?
16ನೇ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇರುವ ಸುಮಿತ್ರಾ ಮಹಾಜನ್ ಅವರನ್ನು ರಾಜ್ಯಕ್ಕೆ ರಾಜ್ಯಪಾಲೆಯಾಗಿ ನೇಮಿಸುವ ಸಾಧ್ಯತೆಯೂ ಇದೆ. ಸುಮಿತ್ರಾ ಅವರು ಅಜಾತ ಶತ್ರು ಎಂದು ಹೆಸರು ಮಾಡಿದವರು. ಪಕ್ಷಭೇದ ಬಿಟ್ಟು ಕರ್ತವ್ಯವನ್ನು ಇವರು ನಿರ್ವಹಿಸಬಲ್ಲರು.

ಉಮಾಭಾರತಿ ಆಗುವರೇ ರಾಜ್ಯಪಾಲೆ?
ಸಾದ್ವಿ ಉಮಾ ಭಾರತಿ ಅವರನ್ನು ಕರ್ನಾಟಕದ ರಾಜ್ಯಪಾಲೆಯನ್ನಾಗಿ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅವರೂ ಸಹ ಈ ಬಾರಿ ಚುನಾವಣೆ ಸ್ಪರ್ಧಿಸಿಲ್ಲ, ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನವನ್ನೂ ಅವರಿಗೆ ನೀಡುವ ಸಾಧ್ಯತೆ ಕಡಿಮೆ ಇದೆ. ಆದರೆ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಬದಲಿಗೆ ಪಕ್ಷದ ಹುದ್ದೆಗೆ ನೇಮಿಸುವ ಸಾಧ್ಯತೆ ಇದೆ.












Click it and Unblock the Notifications