"ಸಣ್ಣ & ಮಧ್ಯಮ ಕೈಗಾರಿಕೆಗಳು GST ಪರಿಣಾಮದಿಂದ ಮುಚ್ಚಿಹೋಗಿದ್ದಕ್ಕೆ ಜವಾಬ್ದಾರಿ ಯಾರು ?"
ಕೇಂದ್ರ ಸರ್ಕಾರವು "GST ಉಳಿತಾಯ ಉತ್ಸವ" ಪ್ರಾರಂಭ ಮಾಡುವುದಾಗಿ ಹೇಳಿದ್ದು, ಇದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವು ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದಿಂದಲೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಏನಿದು "GST ಉಳಿತಾಯ ಉತ್ಸವ"ಕ್ಕೆ ವ್ಯಕ್ತವಾಗುತ್ತಿರುವ ವಿರೋಧ ಕರ್ನಾಟಕದಲ್ಲಿ ಇದಕ್ಕೆ ವಿರೋದ ವ್ಯಕ್ತಪಡಿಸುತ್ತಿರುವವರು ಯಾರು ಎನ್ನುವ ವಿವರ ಇಲ್ಲಿದೆ.
ಕೇಂದ್ರ ಸರ್ಕಾರದ "GST ಉಳಿತಾಯ ಉತ್ಸವ"ವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ವಿರೋಧಿಸಿದ್ದಾರೆ. ಗಬ್ಬರ್ ಸಿಂಗ್ ದರೋಡೆಯ ಪ್ರಮಾಣವನ್ನು ಕಡಿಮೆ ಮಾಡಿದ್ದಾನೆ, ಇದಕ್ಕಾಗಿ ಎಲ್ಲರೂ ಉತ್ಸವ ಆಚರಿಸಬೇಕು. ಈ ಗಬ್ಬರ್ ಸಿಂಗ್ 8 ವರ್ಷ ಮಾಡಿದ ಪೂರ್ಣ ಪ್ರಮಾಣದ ಲೂಟಿಯನ್ನು ಎಲ್ಲರೂ ಮರೆತುಬಿಡಬೇಕು!

ಕೇಂದ್ರ ಸರ್ಕಾರದ ವರಸೆ ಇದು ಎಂದು ಟೀಕೆ ಮಾಡಿದ್ದಾರೆ.
ಮುಂದುವರಿದು ಈ ದೇಶದ ಜನರನ್ನು ಹೇಗೆ ಬೇಕಾದರೂ ಮರಳು ಮಾಡಬಹುದಾದಷ್ಟು ಮೂರ್ಖರು ಎಂದು ಭ್ರಮಿಸಿದೆ ಬಿಜೆಪಿ. ಆದರೆ ಜನರು ಮೂರ್ಖರಲ್ಲ.ಈಗ "GST ಉಳಿತಾಯ ಉತ್ಸವ" ಮಾಡಬೇಕಂತೆ, ಕಳೆದ 8 ವರ್ಷದಿಂದ "GST ಲೂಟಿ ಉತ್ಸವ" ಮಾಡುತ್ತಿದ್ದರಲ್ಲವೇ? ಜನರನ್ನು ಬಾವಿಗೆ ತಳ್ಳಿದ್ದು ಇವರೇ, ಈಗ ಬಾವಿಯಿಂದ ಮೇಲೇತ್ತಲು ಏಣಿ ಕೊಟ್ಟಿದ್ದೇವೆ ಎನ್ನುತ್ತಿರುವವರೂ ಇವರೇ. ಏಣಿ ಕೊಟ್ಟಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದೆ. 8 ವರ್ಷದಿಂದ ಜನರನ್ನು ಬಾವಿಗೆ ತಳ್ಳಿದ್ದರ ಪಾಪದ ಹೊಣೆಯೂ ಮೋದಿಯವರದ್ದೇ ಎಂದು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಬ್ಬರ್ ಸಿಂಗ್ ಟ್ಯಾಕ್ಸ್ ಕಡಿತಗೊಳಿಸಬೇಕು ಎಂದು ಈ ಹಿಂದೆಯೇ ಹಲವು ಬಾರಿ ಆಗ್ರಹಿಸಿದ್ದಾಗ ಅವರ ಮಾತುಗಳನ್ನು ವ್ಯಂಗ್ಯ ಮಾಡಿದ್ದ ಬಿಜೆಪಿಯವರಿಗೆ ಈಗ ಜನಾಕ್ರೋಶಕ್ಕೆ ಬೆದರಿ GST ಕಡಿತಗೊಳಿಸಿದ್ದರ ಕ್ರೆಡಿಟ್ ತೆಗೆದುಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ದುಬಾರಿ GST ಜಾರಿ ಮಾಡಿದಾಗಲೂ ಮಾಸ್ಟರ್ ಸ್ಟ್ರೋಕ್ ಅಂದರು, ಈಗ GST ಕಡಿತಗೊಳಿಸಿದ್ದನ್ನೂ ಮಾಸ್ಟರ್ ಸ್ಟ್ರೋಕ್ ಅನ್ನುತ್ತಿದ್ದಾರೆ!
ಆದರೆ, ಈ ಎಂಟು ವರ್ಷಗಳಲ್ಲಿ ಜನತೆಗೆ, ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು ಭರಿಸುವವರು ಯಾರು ಎಂದಿದ್ದಾರೆ. ಈ 8 ವರ್ಷಗಳಲ್ಲಿ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು GST ಪರಿಣಾಮದಿಂದ ಮುಚ್ಚಿಹೋಗಿದ್ದಕ್ಕೆ ಜವಾಬ್ದಾರಿ ಯಾರು. ಈ 8 ವರ್ಷಗಳಲ್ಲಿ ದೇಶದ ಆರ್ಥಿಕತೆಗೆ ಬಿದ್ದ ಹೊಡೆತಕ್ಕೆ ಹೊಣೆ ಯಾರು. ಆಗಿರುವ ಉದ್ಯೋಗ ನಷ್ಟಕ್ಕೆ ಜವಾಬ್ದಾರಿ ಯಾರು ಹಾಗೂ ಇದೆಲ್ಲವಕ್ಕೂ ಮೋದಿಯವರೇ ಹೊಣೆಯಲ್ಲವೇ ಕರ್ನಾಟಕ ಬಿಜೆಪಿ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications